ಶಾಸ್ತ್ರ-ಪದ್ಧತಿಗಳು

ಕೆಲವು ವಿಷಯಗಳ ಬಗ್ಗೆ ನಮಗೆ ಮಾಹಿತಿ ಇಲ್ಲದಿದ್ದಾಗ ನಾವು ತಪ್ಪು ಮಾಡುವ ಸಂಭವ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಷಯಗಳನ್ನು ನಾವು ಪಾಲಿಸದೆ ಹೋದರೆ ನಮಗೆ ಕೆಡುಕಾಗುತ್ತದೆ.

ಜೇಷ್ಠ ಮಾಸದಲ್ಲಿ, ಜೇಷ್ಠ ನಕ್ಷತ್ರದಲ್ಲಿ ಹುಟ್ಟಿರುವ ಜೇಷ್ಠ ಮಕ್ಕಳ ಅಂದರೆ ಹಿರಿಯ ಮಕ್ಕಳ ವಿವಾಹವನ್ನು ಎಂದಿಗೂ ಮಾಡಬಾರದು. ಒಂದೇ ವರ್ಷದಲ್ಲಿ ಪುತ್ರನ ವಿವಾಹ ಮಾಡಿ, ಪುತ್ರಿಯ ವಿವಾಹ ಮಾಡಬಾರದು. ವಿವಾಹ, ಉಪನಯನ, ಯಜ್ಞ ಮಾಡುವ ಮೊದಲು ನಾಂದಿ ಇಟ್ಟರೆ (ಅಂದರೆ ದೇವರಿಗೆ ಮಾಡುವುದು) ಸೂತಕ, ಮೈಲಿಗೆ ಬರುವುದಿಲ್ಲ. ನಾಂದೀ ಶಾಸ್ತ್ರವನ್ನು ಸಾಧ್ಯವಾದರೆ ಮಂಗಳವಾರ ಮತ್ತು ಶನಿವಾರಗಳನ್ನು ಬಿಟ್ಟು ಬೇರೆ ವಾರ ಮಾಡಬೇಕು. ಪ್ರದೋಷ ದಿನ ಶಿವ ಪೂಜೆ ಮಾಡಬೇಕು. ಒಂದೇ ವರುಷ ಮೂರು ಶುಭ ಕಾರ್ಯಗಳನ್ನು ಮಾಡಬಾರದು. ವಿವಾಹ ಮಾಡಿದ ಸ್ವಲ್ಪ ದಿನಗಳಲ್ಲಿಯೇ ಗ್ರಹಪ್ರವೇಶ, ಮುಂಜಿ, ಚೌಳ ಮಾಡಬಾರದು

ವಿವಾಹದಲ್ಲಿ ವಧುವಿಗೆ ಗುರುಬಲ ಮತ್ತು ವರನಿಗೆ ರವಿ ಬಲವನ್ನು ಮುಖ್ಯವಾಗಿ ನೋಡಬೇಕು. ಆದರೆ ಇಬ್ಬರಿಗೂ ಚಂದ್ರ ಬಲವನ್ನು ನೋಡಬೇಕು. ಮನೆಯಲ್ಲಿ ಸ್ತ್ರೀಯರು ಗರ್ಭಿಣಿ ಇರುವಾಗ ಮನೆ ಕಟ್ಟುವುದು, ಬಾವಿ ತೆಗೆಯುವದು, ಚೌಳ ಇತ್ಯಾದಿ ಮಾಡಬಾರದು. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಕ್ಕ ತಂಗಿಯರನ್ನು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಣ್ಣ ತಮ್ಮನಿಗೆ ಕೊಡಬಾರದು.ಗುರು ಶುಕ್ರರು ಅಸ್ತರಿರುವಾಗ ಯಾವುದೇ ಶುಭ ಕಾರ್ಯವನ್ನು ಮಾಡಬಾರದು. ಚೌಳವನ್ನು ಮೂರು ಅಥವಾ ಐದನೆಯ ವರ್ಷ ಉತ್ತರಾಯಣದಲ್ಲಿಯೇ ಮಾಡಬೇಕು. ಮನೆಯಲ್ಲಿ ಕುಲ ದೇವರ ಮೂರ್ತಿಯಿಟ್ಟು ಪೂಜಿಸುವುದು ತುಂಬಾ ಉತ್ತಮ.

ಸಗೋತ್ರದಲ್ಲಿ ವಿವಾಹವನ್ನು ಮಾಡಬಾರದು. ಮಂಗಳವಾರ ಮಗಳನ್ನು ಗಂಡನ ಮನೆಗೆ, ಶುಕ್ರವಾರ ಸೊಸೆಯನ್ನು ತವರು ಮನೆಗೆ ಕಳಿಸಬಾರದು. ಮಂಗಳವಾರ, ಶನಿವಾರ ಸಾಲ ತರಬಾರದು. ಶುಕ್ರವಾರ ಸಾಲವನ್ನು ಕೊಡಬಾರದು. ಮಗುವಿಗೆ ಹಾಲುಣಿಸುವಾಗ ಅಡ್ಡ ಹಾಯಬಾರದು. ಗಿಣ್ಣದ ಹಾಲು ಕೊಟ್ಟವರಿಗೆ ಮರಳಿ ಖಾಲಿ ಪಾತ್ರೆಯನ್ನು ಕೊಡಬಾರದು. ಸಂತಾನ ದೋಷಕ್ಕೆ ನಾಗ ಪೂಜೆ, ಬನ್ನಿ ಪೂಜೆ ಮಾಡಬೇಕು.ಮನೆಯಲ್ಲಿ ಸೂತಕ ಇರುವಾಗ ಯಾವುದೇ ಪೂಜಾ ಕಾರ್ಯಗಳನ್ನು ಮತ್ತು ಶುಭ ಕಾರ್ಯಗಳನ್ನು ಮಾಡಬಾರದು. ಸ್ಮಶಾನದಿಂದ ತಿರುಗಿ ಬರುವಾಗ ಹಿಂದಕ್ಕೆ ಮತ್ತೆ ನೋಡಬಾರದು. ಅಮಾವಾಸ್ಯೆ, ಸಂಕ್ರಾಂತಿ,

ಗ್ರಹಣಕಾಲದಲ್ಲಿ ಯಾವುದೇ ಮುಖ್ಯ ಕಾರ್ಯದ ಸಲುವಾಗಿ ಪ್ರಯಾಣವನ್ನು ಮಾಡಬಾರದು. ತೀರ್ಥಕ್ಷೇತ್ರಗಳಲ್ಲಿ ಪೂಜೆ ಮಾಡಿಸಲು ಗುರು ಶುಕ್ರರ ಅಸ್ತ ದೋಷ ಸಂಬಂಧ ಬರುವುದಿಲ್ಲ. ಗ್ರಹಣದ ದಿನ ಮತ್ತು ಅದರ ಮರುದಿನ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ರಾತ್ರಿ ನೂತನ ಗ್ರಹ ಪ್ರವೇಶ ಮಾಡಬಾರದು. ಕರ್ಕ, ಕುಂಭ, ಕನ್ಯಾ ಸಂಕ್ರಾಂತಿಯಲ್ಲಿ ಗ್ರಹಪ್ರವೇಶವನ್ನು ಮಾಡಬಾರದು.

ಅಧಿಕಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು. ವಿಜಯ ದಶಮಿಯು ಗೃಹಪ್ರವೇಶಕ್ಕೆ ಯೋಗ್ಯವಲ್ಲ. ರಾತ್ರಿ ಉಪ್ಪು, ಮೊಸರು ಕಡ ಕೊಡಬಾರದು. ಸೂರ್ಯಾಸ್ತವಾದ ನಂತರ ಹೂವುಗಳನ್ನು, ಹಣ್ಣುಗಳನ್ನು ಕೀಳಬಾರದು. ಸೋಮವಾರ ದಿವಸ ಹತ್ತಿಯನ್ನು ಬಿಡಿಸಬಾರದು. ಬುಧವಾರ ದಿವಸ ಅಭಿಜಿನ್ ಮುಹೂರ್ತ ಇಡಬಾರದು. ತಂದೆ ಸತ್ತರೆ ಒಂದು ವರ್ಷ, ತಾಯಿ ಸತ್ತರೆ ಆರು ತಿಂಗಳು, ಸಹೋದರ ಸತ್ತರೆ ಒಂದು ತಿಂಗಳು ವಿವಾಹ ಆಗ ಕೂಡದು. ತಂದೆ ಮಕ್ಕಳು ಒಂದೇ ದಿನ ಕ್ಷೌರ ಮಾಡಿಸಬಾರದು.

Leave a Comment