ನಾವು ಈ ಲೇಖನದಲ್ಲಿ ಆಹಾರ ಸೇವನೆಯ ನಿಯಮಗಳು ಯಾವುದು ಎಂದು ತಿಳಿಯೋಣ .
1.ಪಂಚಭೂತಗಳಲ್ಲಿ ಒಂದಾಗಿರುವ ಅಗ್ನಿ ತನ್ನ ಆಹಾರವಾದ ಕಟ್ಟಿಗೆ ಸಿಗದಿದ್ದರೆ, ಹೇಗೆ ಆರಿ ಹೋಗುವುದೋ, ಅದೇ ರೀತಿಯಲ್ಲಿ ಹಸಿವಾದಾಗ ಭೋಜನವನ್ನು ಮಾಡದಿದ್ದರೆ , ಜಠರಾಗ್ನಿಯು ಆರಿ ಹೋಗುತ್ತದೆ. ಇದರಿಂದ ಕಣ್ಣುಗಳಲ್ಲಿ ಕತ್ತಲೆ ಕವಿದಂತಾಗಿ ಶರೀರದ ಬಲವೂ ಕ್ಷೀಣಗೊಂಡು ಸಕಲ ಇಂದ್ರಿಯಗಳ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಹಸಿವಾದ ಕೂಡಲೇ ಆಹಾರವನ್ನು ಸೇವಿಸಬೇಕು.
ಹಸಿವಾದಾಗ ಆಹಾರ ಸೇವಿಸಿದರೆ ಜಠರಾಗ್ನಿಯು ನೀವು ತಿಂದ ಆಹಾರವನ್ನು ಸರಿಯಾಗಿ ಪಚನಗೊಳಿಸುವುದು. ಆದ್ದರಿಂದ ಹಸಿವು ಆಗದೆ ಆಹಾರ ಸೇವಿಸಿದರೆ , ಅಜೀರ್ಣವಾಗುವ ಸಂಭವ ಹೆಚ್ಚಾಗವುದು.
ಯಾರು ಹಸಿವಾಗದೆ ಕೇವಲ ನಾಲಿಗೆಯ ಚಪಲತೆಗೆ ಸೋತು ಉಣ್ಣುವರೋ , ಅವರಿಗೆ ಅಜೀರ್ಣ , ವಾಂತಿ , ಬೇದಿ , ತಲೆನೋವು ಮುಂತಾದವುಗಳು ತಲೆ ದೋರುತ್ತವೆ.
ಬಹಳ ತಣ್ಣಗಾದ ಮತ್ತು ಒಣಗಿದ ಆಹಾರ ಪಚನಕ್ಕೆ ಕಷ್ಟವಾಗುತ್ತದೆ . ಹಸಿದ ಆಹಾರವು ದೇಹಕ್ಕೆ ಸೋಂಕು ಮತ್ತು ಹಾನಿಯನ್ನು ಉಂಟು ಮಾಡುತ್ತದೆ. ಬಹಳ ಬಿಸಿಯಾದ ಆಹಾರವು ಕೂಡ ದೇಹಕ್ಕೆ ಹಾನಿಯನ್ನು ಉoಟು ಮಾಡುತ್ತದೆ.
ಕರಿದ ಹುರಿದ ತಿಂಡಿಗಳನ್ನು ಮಸಾಲೆ ಪದಾರ್ಥಗಳನ್ನು ಎಣ್ಣೆ , ತುಪ್ಪ ಇವುಗಳನ್ನು ಮಿತವಾಗಿ
ಸೇವಿಸಬೇಕು.
ಆಹಾರದಲ್ಲಿ ಹಣ್ಣು, ಹಾಲು, ತರಕಾರಿ ಇರುವಂತೆ ನೋಡಿಕೊಳ್ಳಬೇಕು.
ಊಟ ಮಾಡುವಾಗ ಅವಸರ ಬೇಡ, ಹಾಗೆಂದು ತೀರ ನಿಧಾನವೂ ಬೇಡ, ಆಹಾರವನ್ನು ಬಾಯಲ್ಲಿ ಚೆನ್ನಾಗಿ ಜಗಿದು ಲಾಲಾ ರಸದೊಡನೆ ಮೆತ್ತಗೆ ಮಾಡಿ ಮಧ್ಯಮ ಗತಿಯಿಂದ ಉಣ್ಣಬೇಕು .
ಹೆಚ್ಚು ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ಮಧುಮೇಹ, ಅಜೀರ್ಣತೆ , ಕೆಮ್ಮು, ಜ್ವರ, ಹೊಟ್ಟೆಯಲ್ಲಿ ಜಂತುಗಳ ವೃದ್ಧಿ, ಗಂಡಮಾಲೆ ಮಂತಾದ ತೊಂದರೆಗಳು ಉಂಟಾಗುತ್ತವೆ ಎಂದು ಆಯರ್ವೇದ ಗ್ರಂಥಗಳಲ್ಲಿ ಹೇಳಲಾಗಿದೆ.
ಹೆಚ್ಚು ಹುಳಿ ಅಥವಾ ಆಮ್ಲ ಪದಾರ್ಥಗಳನ್ನು ತಿನ್ನುವುದರಿಂದ ಮೈಯಲ್ಲಿ ಕೆರೆತ , ಕಾಮಾಲೆ , ಅವಯವಗಳಲ್ಲಿ ಬಾವು, ಚರ್ಮ ರೋಗಗಳು ಉಂಟಾಗುತ್ತವೆ ಎಂದು ಆಯುರ್ಮೇದದಲ್ಲಿ ಹೇಳಲಾಗಿದೆ.
ಹೆಚ್ಚು ಉಪ್ಪು ಮತ್ತು ಮಸಾಲೆ ಪದಾರ್ಥಗಳು ಸೇವಿಸುವುದರಿಂದ ಕಣ್ಣುಗಳನೊವು , ರಕ್ತಪಿತ್ತ (ಬಾಯಿ, ಮೂಗು, ಗುದದ್ವಾರಗಳಿಂದ ರಕ್ತ ಹೋಗುವುದು) ಕೊದಲು ಬೆಳ್ಳಗಾಗುವುದು ಇತ್ಯಾದಿ ತೊಂದರೆಗಳು ಉಂಟಾಗುತ್ತವೆ.
ಹೆಚ್ಚು ಖಾರದ ಪದಾರ್ಥಗಳನ್ನು ತಿನ್ನುವುದರಿಂದ ಬಾಯಿ , ಅಂಗುಳು ಗಂಟಲು, ತುಟಿಗಳು ಒಣಗುತ್ತವೆ . ಮತ್ತು ಮೂರ್ಛೆ , ಬಾಯಾರಿಕೆ ಉಂಟಾಗುವುದಲ್ಲದೇ ಶರೀರದ ಬಲ ಮತ್ತು ಕಾಂತಿ ಕ್ಷೀಣವಾಗುತ್ತದೆ.
12 ಊಟವಾದ ಕೂಡಲೇ ವೇಗದಿಂದ ಓಡುವುದನ್ನಾಗಲಿ ತಿರುಗಾಡುವುದನ್ನಾಗಲಿ ಮಾಡಬಾರದು. ಭೋಜನಾ ನಂತರ ಯಾರು ಓಡುವನೋ , ಅವನ ಹಿಂದೆಯೇ ಮೃತ್ಯುವು ಓಡುತ್ತದೆ ಎಂದು ಆಯುರ್ವೇದ ಗ್ರಂಥಗಳಲ್ಲಿ ಹೇಳಲಾಗಿದೆ.
ಶರೀರಕ್ಕೆ ಆಯಾಸ ಉಂಟಾಗುವಂತಹ ಕಾರ್ಯಗಳನ್ನು ಮಾಡಿ ತಕ್ಷಣವೇ ನೀರನ್ನು ಕುಡಿಯುವುದಾಗಲಿ , ಊಟ ಮಾಡುವುದಾಗಲಿ , ಬಹಳ ಅಪಾಯಕರವಾಗಿರುತ್ತದೆ . ಆ ಸ್ಥಿತಿಯಲ್ಲಿ ತಕ್ಷಣ ಆಹಾರವನ್ನು ಜೀರ್ಣ ಮಾಡಿ ಕೊಳ್ಳಲು ದೇಹವು ಸಿದ್ಧವಾಗಿರುವುದಿಲ್ಲ. ಹಠಾತ್ತಾಗಿ ವಾಂತಿ, ವಾಕರಿಕೆ , ಉಂಟಾಗುತ್ತದೆ
ಊಟವಾದ ತಕ್ಷಣ ಸೈಕಲ್ ಹೊಡೆಯುವುದಾಗಲಿ, ಕುದುರೆ ಹತ್ತುವುದಾಗಲಿ , ವ್ಯಾಯಾಮ ಮಾಡುವುದಾಗಲಿ , ಬೆಂಕಿಯನ್ನು ಕಾಯಿಸುವುದಾಗಲಿ , ಮಾಡಬಾರದು.