ನಂದಾದೀಪ ಎಂದರೇನು? ದೀಪಗಳಲ್ಲಿ ಎಷ್ಟು ವಿಧ? ಕೊಬ್ಬರಿ ಎಣ್ಣೆ ದೀಪದ ಮಹತ್ವ ಮತ್ತು ದೇವರ ದೀಪಕ್ಕೆ ಉಪಯೋಗಿಸುವ ಎಣ್ಣೆಗಳ ಬಗ್ಗೆ ಒಂದಿಷ್ಟು ವಿಚಾರಧಾರೆ.ಹಿಂದೂ ಧರ್ಮದಲ್ಲಿ ದೀಪವನ್ನು ಎರಡು ರೀತಿಯಲ್ಲಿ ಹಚ್ಚುವ ಪದ್ಧತಿ ಇದೆ.
ನಂದಾದೀಪ ಮತ್ತು ತಾತ್ಕಾಲಿಕ ದೀಪ. ದಿನವಿಡಿ ನಂದಿ ಹೋಗದೇ ದೇವರನ್ನು ಬೆಳಗುವ ದೀಪವೇ ನಂದಾದೀಪ ನಂದ ಎಂದರೆ ಭಗವಂತ ದೇವರ ಮುಂದೆ ಹಚ್ಚಿದ ನಂದಾದೀಪದ ಮೂಲದಲ್ಲಿ ಗೌರಿಯೂ, ಮಧ್ಯ ಭಾಗದಲ್ಲಿ ಸರಸ್ವತಿಯೂ, ಅಗ್ರಭಾಗದಲ್ಲಿ ಲಕ್ಷ್ಮಿಯೂ ನೆಲೆಸಿರುತ್ತಾರೆ. ನಂದಾದೀಪ ಯಾರ ಮನೆಯಲ್ಲಿ ಬೆಳಗುತ್ತದೆಯೋ ಅಂತಹ ಮನೆಯಲ್ಲಿ ದೈವೀ ಪ್ರಭಾವದ ಶಕ್ತಿ ಹೆಚ್ಚಾಗಿರುತ್ತದೆ.
ಒಮ್ಮೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಅದು ಉರಿಯುವಷ್ಟು ಕಾಲ ಇಡುವ ದೀಪವೇ ತಾತ್ಕಾಲಿಕ ದೀಪ.
ನಂದಾದೀಪಗಳನ್ನು ಪೂರ್ವ ದಿಕ್ಕಿನಲ್ಲಿ ಹಚ್ಚಿದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರಕುವುದು. ಕೆಟ್ಟ ಶಕ್ತಿ ವಾಸ್ತುದೋಷ ನಿವಾರಣೆಯಾಗುತ್ತದೆ. ಪೂರ್ವ ದಿಕ್ಕು ಅಭಿವೃದ್ಧಿಯ ಸಂಕೇತ. ಪಶ್ಚಿಮ ದಿಕ್ಕಿಗೆ ದೀಪದ ಮುಖ ಮಾಡಿ ಹಚ್ಚಿದರೆ ಕಲಹ ಹೆಚ್ಚು, ನೆಮ್ಮದಿ ಕಡಿಮೆ ಅಭಿವೃದ್ಧಿ ಕುಂಠಿತವಾಗುತ್ತದೆ. ಪಶ್ಚಿಮ ಮುಳುಗುವ ದಿಕ್ಕು ಅಂತ ಹೇಳುತ್ತೇವೆ ಅಂದರೆ ಕತ್ತಲೆ ಎಂದರ್ಥ.
ದಕ್ಷಿಣ ದಿಕ್ಕಿಗೆ ದೀಪದ ಮುಖಮಾಡಿ ಹಚ್ಚಿದರೆ ಆದಾಯ ಕಡಿಮೆ ಇದ್ದು ಖರ್ಚು ಹೆಚ್ಚಾಗುವುದು. ಅನಾರೋಗ್ಯ ಸಮಸ್ಯೆಗಳು ಜಾಸ್ತಿಯಾಗುತ್ತದೆ. ಇದು ಯಮನ ದಿಕ್ಕು ಅಶ್ವಯುಜ ತ್ರಯೋದಶಿ ದಿವಸ ಮಾತ್ರ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಹಚ್ಚಬೇಕು.ಉತ್ತರ ದಿಕ್ಕಿಗೆ ದೀಪದ ಮುಖಮಾಡಿ ಹಚ್ಚಿದರೆ ಸ್ವಲ್ಪ ಈಶಾನ್ಯ ಮೂಲೆಗೆ ತಿರುಗಿಸಿ ಹಚ್ಚಿದರೆ ಶ್ರೀಲಕ್ಷ್ಮಿ ಕಟಾಕ್ಷವಾಗಿ ಮನೆಯು ಸದಾ ನೆಮ್ಮದಿಯಿಂದ ಕೂಡಿರುತ್ತದೆ. ಕೆಲವು ವಾಸ್ತುದೋಷಗಳು ಪರಿಹಾರವಾಗುತ್ತವೆ.
ಹಿತ್ತಾಳೆ ದೀಪದಿಂದ ದೇವರಿಗೆ ದೀಪ ಹಚ್ಚಿದರೆ ಏನು ಫಲ? • ಯಾರ ಮನೆಯಲ್ಲಿ ದೇವರಿಗೆ ಹಿತ್ತಾಳೆ ದೀಪವನ್ನು ಹಚ್ಚುತ್ತಾರೋ ಆ ಮನೆಯಲ್ಲಿ ದೇವರಿಗೆ ತೇಜಸ್ಸು ಹೆಚ್ಚಾಗಿ, ಮನೆಗೆ ದೈವಬಲ ಬರುವುದು.
• ಹಿತ್ತಾಳೆ ದೀಪವನ್ನು ಹಚ್ಚಿ ದೇವರನ್ನು ಪೂಜಿಸಿದರೆ, ಆ ಮನೆಯಲ್ಲಿ ರೋಗಭಾದೆಗಳು ಅಪಮೃತ್ಯುಗಳು ಬರುವುದಿಲ್ಲ. • ಮಂತ್ರಸಿದ್ದಿ ಬೇಕೆನ್ನುವವರು ಹಿತ್ತಾಳೆ ದೀಪ ಹಚ್ಚಿ ಪೂಜಿಸಿದರೆ ಮಂತ್ರವು ಬೇಗ ಸಿದ್ಧಿಯಾಗುವುದು.
• ದೇವರ ದೀಪ ಹಚ್ಚುವಾಗ ಯಾವಾಗಲೂ ಕುಳಿತುಕೊಂಡೇ ಹಚ್ಚಬೇಕು.
• ದೀಪದ ಪಾತ್ರೆ ಶುಭ್ರವಾಗಿದ್ದಷ್ಟು ದೀಪ ಹಚ್ಚುವವರ ಮನಸ್ಸು ಶುದ್ಧವಾಗಿರುತ್ತದೆ.
• ದೀಪ ಹಚ್ಚುವ ಜಾಗದಲ್ಲಿ ಗಾಳಿಯು ಮಂದಸ್ಮಿತವಾಗಿದ್ದು, ತಂಗಾಳಿಯು ಬೀಸುತ್ತಿದ್ದರೆ, ಅಂತಹ ಮನೆಯಲ್ಲಿ ಶಾಂತಿಯುತವಾದ ವಾತಾವರಣವಿದ್ದು, ನೆನೆದ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ.
• ಗಾಳಿಯು ಜೋರಾಗಿ ಬೀಸುತ್ತಿದ್ದರೆ ಆ ಮನೆಯಲ್ಲಿ ಬಂಧು ಬಳಗದವರಿಂದಲೇ ಸಮಸ್ಯೆ ಉಂಟಾಗುತ್ತವೆ. ಶತ್ರುಗಳು ಜಾಸ್ತಿ. • ದೀಪದ ಸ್ತಂಭವು ಎರಡೂ ಒಂದೇ ಸಮನಾಗಿರಬೇಕು. ಒಂದು ಚಿಕ್ಕದು, ಒಂದು ದೊಡ್ಡದು ಇರಬಾರದು.
• ದೀಪದ ಸ್ತಂಭ, ಊನ, ಭಿನ್ನವಾಗಿದ್ದರೆ ಅಥವಾ ಒಡೆದಿದ್ದರೆ, ಕೆಲಸ ಕಾರ್ಯಗಳಲ್ಲಿ ತೊಂದರೆ, ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ. • ಬೆಸುಗೆ ಮಾಡಿರುವ ದೀಪದ ಸ್ತಂಭವನ್ನು ಉಪಯೋಗಿಸಬಾರದು ಅಂದರೆ ಒಮ್ಮೆ ದೀಪದ ಸ್ತಂಭವು ಭಿನ್ನವಾಗಿದ್ದು ಮತ್ತೆ ಅದನ್ನು ಬೆಸುಗೆ ಹಾಕಿಸಿ ಸರಿಪಡಿಸಿದ ನಂತರವೂ ಉಪಯೋಗಿಸಬಾರದು.
ದೇವರ ದೀಪಕ್ಕೆ ಉಪಯೋಗಿಸುವ ಎಣ್ಣೆಯ ವಿಚಾರ:-
• ದೀಪಕ್ಕೆ ಉಪಯೋಗಿಸುವ ಎಣ್ಣೆಯು ದಪ್ಪವಿದ್ದರೆ (ಹರಳೆಣ್ಣೆಯ ತರಹ) ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳೂ ಬಹಳ ನಿಧಾನವಾಗಿ ನಡೆಯುತ್ತದೆ. • ದೀಪಕ್ಕೆ ಉಪಯೋಗಿಸುವ ಎಣ್ಣೆಯು ತೆಳುವಾಗಿದ್ದರೆ (ಕೊಬ್ಬರಿ ಎಣ್ಣೆ) ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳೂ ಸುಸೂತ್ರವಾಗಿ ನಡೆಯುತ್ತದೆ. ಕಷ್ಟಗಳು ನಿವಾರಣೆಯಾಗುತ್ತದೆ.
• ದೀಪಕ್ಕೆ ಉಪಯೋಗಿಸುವ ಎಣ್ಣೆಯು ಒಂದೇ ಎಣ್ಣೆಯಾಗಿದ್ದರೆ ಕೆಲಸ ಕಾರ್ಯಗಳು ಸುಸೂತ್ರವಾಗಿಯೂ ಸುಗಮವಾಗಿಯೂ ನಡೆಯುತ್ತದೆ. • ದೀಪಕ್ಕೆ ಬಳಸುವ ಎಣ್ಣೆಯು ಮಿಶ್ರವಾಗಿದ್ದರೆ ಅಂದರೆ ಎಲ್ಲಾ ತರಹದ ಎಣ್ಣೆ ಮಿಶ್ರವಾಗಿದ್ದರೆ, ಫಲ ಸಿಗದೆಯೂ ಇರಬಹುದು. • ದೀಪದ ಎಣ್ಣೆಯು ಮಲಿನವಾಗಿದ್ದರೆ ಮನೆಯಲ್ಲಿ ಇರುವವರಿಗೆ ರೋಗಭಾದೆ ಬರುತ್ತದೆ.
• ದೀಪದ ಎಣ್ಣೆಯು ಕಪ್ಪಾಗಿದ್ದರೆ ಮನೆಯಲ್ಲಿರುವವರಿಗೆ ತೇಜಸ್ಸು ಕಡಿಮೆಯಾಗುತ್ತದೆ.
• ದೀಪದ ಎಣ್ಣೆಯು ಪರಿಮಳ, ಸುವಾಸನೆಯಿಂದ ಕೂಡಿದ್ದರೆ ಮನೆಯಲ್ಲಿ ಅಷ್ಟ್ರೈಶ್ವರ್ಯ ಹಾಗೂ ನವನಿಧಿಗಳು ಪ್ರಾಪ್ತಿಯಾಗುತ್ತದೆ. • ದೀಪಕ್ಕೆ ಬಿಸಿ ಎಣ್ಣೆ ಅಥವಾ ಬಿಸಿ ತುಪ್ಪ ಹಾಕಿದರೆ, ಮನೆಯಲ್ಲಿ ಕೂಗಾಟ, ಕೋಪ ಹಠ ಇನ್ನೂ ಜಾಸ್ತಿಯಾಗುತ್ತದೆ.
• ದೀಪದ ಎಣ್ಣೆಯು ತಂಪಾಗಿದ್ದರೆ ಮನೆಯಲ್ಲಿ ಶಾಂತಿ ವಾತಾವರಣ, ಇದ್ದು ಸುಖ ಸಂತೋಷ ನೆಮ್ಮದಿ ಇರುತ್ತದೆ.
• ದೀಪದ ಎಣ್ಣೆಯು ಕಲ್ಮಶವಿಲ್ಲದೆ ಎಷ್ಟು ಶುದ್ಧಿಯಾಗಿರುವುದೋ ಅಷ್ಟೂ ಶುಭಫಲ ಉಂಟಾಗುತ್ತದೆ.
• ಅಂತಾ ಎಣ್ಣೆಯಿಂದ ಮನೆಯಲ್ಲಿ ದೀಪ ಹಚ್ಚಿದರೆ, ಆ ಮನೆಗೆ ದೇವರ ಹಾಗೂ ಗುರುಗಳ ಅನುಗ್ರಹ ಉಂಟಾಗಿ ಮನೆಯು ಬಹಳ ಚೆನ್ನಾಗಿ ನಡೆಯುತ್ತದೆ. ಯಾವುದೇ ತರಹದ ಗಲಾಟೆ, ಗಂಡಾಂತರಗಳು ಅಪಮೃತ್ಯುಗಳು ಬರುವುದಿಲ್ಲ.
ಕೊಬ್ಬರಿ ಎಣ್ಣೆಯ ದೀಪದ ಮಹತ್ವಗಳು• ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚುತ್ತಾರೋ, ಆ ಮನೆಯಲ್ಲಿ ಶುಭಕಾರ್ಯಗಳು ಬಹಳ ಬೇಗ ಜರುಗುತ್ತವೆ. • ಯಾರು ಕುಲದೇವತೆಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ನಂದಾದೀಪ ಹಚ್ಚುತ್ತಾರೋ ಅವರ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುತ್ತದೆ.
• ಮದುವೆಯಾಗದ ಗಂಡು/ಹೆಣ್ಣು ಮಕ್ಕಳು ಕಾತ್ಯಾಯನಿ ಪೂಜೆ ಮಾಡುವಾಗ ದೇವರ ದೀಪಕ್ಕೆ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿದರೆ ಶೀರ್ಘದಲ್ಲಿಯೇ ವಿವಾಹ ನಿಶ್ಚಯವು ಆಗುತ್ತದೆ. • ಸರಿಯಾದ ಪೂಜಾ ವಿಧಾನವನ್ನು ತಿಳಿದು ಮಂಗಳವಾರ ಶ್ರೀ ಸುಬ್ರಹ್ಮಣ್ಯ ದೇವರನ್ನು ಪೂಜಿಸುವಾಗ ಕೊಬ್ಬರಿ ಎಣ್ಣೆಯ ದೀಪ ಹಚ್ಚಿದರೆ ಮಕ್ಕಳು ಇಲ್ಲದವರಿಗೆ ಸಂತಾನಭಾಗ್ಯವಾಗುತ್ತದೆ.
• ಅಷ್ಟೋತ್ತರ, ಸಂಕಲ್ಪದಿಂದ ಅಶ್ವಥ ಮರದ ಕೆಳಗೆ ಇರುವ ನಾಗರಕಲ್ಲಿಗೆ ತನಿ ಎರೆಯುವಾಗ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚಿದರೆ ದಾಂಪತ್ಯ ಕಲಹ ನಿವಾರಣೆಯಾಗುತ್ತದೆ.
• ಹೋಮದ ಪೂರ್ಣಾಹುತಿಗೆ ರೇಷ್ಮೆವಸ್ತ್ರವನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಹೋಮಕುಂಡಕ್ಕೆ ಹಾಕಿದರೆ ಅಷ್ಟನಿಧಿ, ನವನಿಧಿ ಪ್ರಾಪ್ತಿಯಾಗುತ್ತದೆ.
• ವಿಶೇಷ ಸ್ತೋತ್ರ, ಸಂಕಲ್ಪ, ನೈವೇದ್ಯದಿಂದ ಪ್ರತೀ ಶನಿವಾರದ ದಿನ ಶ್ರೀನಿವಾಸ ದೇವರಿಗೆ ಮನೆಯಲ್ಲಿ ಯಾರು ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿ, ತುಳಸಿಹಾರ ಹಾಕಿ ಪೂಜಿಸುತ್ತಾರೋ ಅವರಿಗೆ ಹಣದ ಸಮಸ್ಯೆ ನಿವಾರಣೆಯಾಗುತ್ತದೆ. • ಪಿತೃಶ್ರಾದ್ಧದ ಸಮಯದಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು ವಿಷ್ಣುಪಾದದ ಮುಂದೆ ಹಚ್ಚಿಟ್ಟರೆ ಸಮಸ್ತ ಪಿತೃದೋಷ ನಿವಾರಣೆಯಾಗುತ್ತದೆ.• ಇಷ್ಟಾರ್ಥ ಸಿದ್ಧಿ, ಸುಖ ಸಂತೋಷ ಸಂಮೃದ್ಧಿಗಾಗಿ ಉತ್ತಮ ಆರೋಗ್ಯ ಪ್ರಾಪ್ತಿಗಾಗಿ ಮತ್ತು ಹಬ್ಬ ಹರಿದಿನಗಳಿಗೆ ಆಯಾ ದೇವರ ಸಂಕಲ್ಪದ ಜೊತೆಯಲ್ಲಿ ನಿಮ್ಮ ಇಷ್ಟ ಹಾಗೂ ಅನುಕೂಲಕ್ಕೆ ತಕ್ಕಂತೆ ಎಳ್ಳಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಗಳಿಂದ ದೀಪ ಬೆಳಗಿಸಬಹುದು.