ಕನ್ಯಾರಾಶಿಯ ಸಂಕೇತ ಹೆಣ್ಣು. ಸತ್ಯ, ಗೌರವ ಹಾಗೂ ಒಳ್ಳೆತನದ ಸಂಕೇತ. ಸರಿಯಾಗಿದ್ದರೇ ಪರವಾಗಿ ನಿಲ್ಲುವ ಗುಣ. ಕನ್ಯಾರಾಶಿ ಶುದ್ಧತೆಯ ಸಂಕೇತ. ರಾಶಿಗಳಲ್ಲೇ ಅತ್ಯಂತ ಸುಂದರ ರಾಶಿ ಎಂದು ಹೇಳಬಹುದು. ಈ ರಾಶಿಯವರು ಹೆಚ್ಚು ಗುಟ್ಟುಮಾಡುವವರಾಗಿರುತ್ತಾರೆ. ಕನ್ಯಾರಾಶಿಗೆ ಅಧಿಪತಿ ಬುಧ. ಕನ್ಯಾರಾಶಿಯ ಜನ ಸರಾಸರಿ ಎತ್ತರವಿದ್ದು, ತೆಳುವಾದ ಚರ್ಮದ ಮೈಬಣ್ಣ, ಎತ್ತರವಾದ ಹಣೆ, ಸುಂದರವಾದ ಕಣ್ಣುಗಳು, ಸೂಕ್ಷ್ಮವಾದ ಬಾಯಿ ಮತ್ತು ಸೂಕ್ಷ್ಮವಾದ ದೇಹರಚನೆ
ಇವರದು ಮುಂಭಾಗದ ಹಲ್ಲುಗಳಲ್ಲಿ ಅಂತರವಿದ್ದು ಸುಂದರವಾಗಿರುತ್ತಾರೆ. ಇವರಿಗೆ ಬುಧನು ಬಹಳ ರಾಜಯೋಗವನ್ನು ಉಂಟುಮಾಡುತ್ತಾನೆ. ರಾಜಕೀಯದಲ್ಲಿ ಮತ್ತು ಉನ್ನತ ಹುದ್ದೆಯನ್ನ ಅಲಂಕರಿಸುತ್ತಾರೆ. ಇವರಿಗೆ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಹೆಚ್ಚಿನ ಪ್ರಜ್ಞೆ ಇದೆ. ಈ ರಾಶಿಯ ಜನ ಫರ್ಫೆಕ್ಟ್ ಎಂದು ಕರೆಯಿಸಿಕೊಳ್ಳುತ್ತಾರೆ.
ಇವರು ಏನೇ ಕೆಲಸ ಮಾಡಿದರೂ ಪೂರ್ತಿ ಮಾಡಿ ಮುಗಿಸುತ್ತಾರೆ. ಪ್ರಾಮಾಣಿಕವಾಗಿರುತ್ತಾರೆ. ಕುಟುಂಬ, ಸ್ನೇಹಿತರು, ಪ್ರೀತಿಪಾತ್ರರ ಕಾಳಜಿ ಇವರಿಗೆ ಬಹಳ ಮುಖ್ಯ. ಯಾರೇ ಸಹಾಯ ಕೇಳಿದರೂ ಮಾಡಲು ಸಿದ್ಧರಾಗಿರುತ್ತಾರೆ. ಒಳ್ಳೆಯ ಮಾತುಗಾರರು ಹಾಗೂ ಶಾರ್ಟ್ ಟೆಂಪರ್ ಇವರು. ಫಿಟ್ ನೆಸ್ ಗೆ ಒತ್ತು ಕೊಡುತ್ತಾರೆ. ಯಾವಾಗಲೂ ತಮ್ಮ ಪ್ರೀತಿಪಾತ್ರರ ಯೋಗಕ್ಷೇಮಗಳನ್ನು ನೋಡಿಕೊಳ್ಳುತ್ತಾರೆ.
ಇವರಿಗೆ ಸಮಯ, ಸ್ವಚ್ಛತೆ, ಶಿಸ್ತು, ಬಹಳ ಮುಖ್ಯವಾಗಿರುತ್ತದೆ. ಬುದ್ಧಿವಂತರಾಗಿದ್ದರೂ ಕೆಲವೊಮ್ಮೆ ಗೊಂದಲಕ್ಕೆ ಒಳಗಾಗುತ್ತಾರೆ. ಇವರು ಸಕಲ ಕಲಾ ವಲ್ಲಭರು, ತುಂಬಾ ಎಮೋಷನ್ಸ್ ಆದರೇ ಹೊರಗಡೆ ತೋರಿಸಿಕೊಳ್ಳುವುದೇ ಇಲ್ಲ. ಪ್ರಾಕ್ಟಿಕಲ್ ಆಗಿ ಇರುವ ಸ್ವಭಾವದವರು. ಆರೋಗ್ಯದಲ್ಲಿ ಇವರು ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ . ಯಾವಾಗಲೂ ವ್ಯಾಯಾಮ ಮಾಡಿ ತೂಕವನ್ನು ಮೈಂಟೈನ್ ಮಾಡುತ್ತಿರುತ್ತಾರೆ.
ಅನಾರೋಗ್ಯಕ್ಕೆ ಒಳಗಾಗುವುದು ತುಂಬಾ ಕಡಿಮೆ. ಕೆಲವೊಮ್ಮೆ ಶ್ವಾಸಕೋಶ, ಸೊಂಟ, ಕರುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದಂತಹ ತೊಂದರೆಗಳು ಗ್ಯಾರಂಟಿ. ಕೆಲವೊಮ್ಮೆ ಅತೀಯಾದ ಚಿಂತೆ, ಮಾನಸಿಕ ಅಸ್ವಸ್ಥತೆಗೆ ದಾರಿ ಮಾಡಿಕೊಡುತ್ತದೆ. ಕನ್ಯಾರಾಶಿಯವರು ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಉದ್ಯೋಗದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ.
ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ಉದ್ಯೋಗದಲ್ಲಿ ಸಾಕಷ್ಟು ಹೆಸರು ಗಳಿಸಿ ಮಾದರಿಯಾಗುತ್ತಾರೆ. ಗಣಿತ, ಭೌತಶಾಸ್ತ್ರ, ಹಣಕಾಸು, ಇಂಜಿನಿಯರಿಂಗ್, ರಿಸರ್ಚ್, ಮೆಡಿಕಲ್, ಷೇರುಮಾರುಕಟ್ಟೆಯಲ್ಲಿ ಉದ್ಯೋಗ ಮಾಡಿದರೇ ಉತ್ತಮ. ಅಕೌಂಟೆಂಟ್ಗಳು, ವಕೀಲರು, ಶಿಕ್ಷಕ ವೃತ್ತಿ ಕೂಡ ಇವರಿಗೆ ಹೊಂದಿಕೆಯಾಗುತ್ತದೆ. ಯಾವಾಗಲೂ ಸೂಕ್ಷ್ಮ, ದಕ್ಷ, ಜಾಗರೂಕ ಪರ್ಫೆಕ್ಟ್ ಆಗಿದ್ದರೂ ಕೆಲವೊಮ್ಮೆ ಸ್ವಾರ್ಥ, ಕಿರಿಕಿರಿ, ಆತಂಕ, ಸಂದೇಹ,
ಎದರಿಕೆ ಗುಣಗಳನ್ನು ಹೊಂದಿರುತ್ತಾರೆ. ಈ ರಾಶಿಯ ಮಹಿಳೆಯರು ನೋಡಲು ಆಕರ್ಷಕವಾಗಿದ್ದು ,ಹಾಸ್ಯ ಹಾಗೂ ಮನೋರಂಜನೆಯ ಮನಸ್ಥಿತಿಯವರು. ಮೃದು ಮನಸ್ಸಿನವರು ಮತ್ತು ಪ್ರಾಣಿಪ್ರಿಯರು. ಕೆಲಸದಲ್ಲಿ ತಮಗೆ ಎಲ್ಲಾ ಗೊತ್ತು ಎಂದು ತಿಳಿದುಕೊಂಡಿರುತ್ತಾರೆ. ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಿದರೇ ಇವರಿಗೆ ಶೇ 100 ರಷ್ಟು ಯಶಸ್ಸು ಗ್ಯಾರಂಟಿ. ಆದರೇ ಇವರು ಮನಸ್ಸು ಮಾಡುವುದೇ ದೊಡ್ಡ ವಿಷಯವಾಗಿರುತ್ತದೆ. ಪರೀಕ್ಷೆಯಲ್ಲಿ ಓದದೇ ಹೆಚ್ಚು ಸ್ಕೋರ್ ಮಾಡುವ ಸಾಲಿಗೆ ಸೇರಿದವರು.
ಈ ರಾಶಿಯ ಪುರುಷರು ಎಲ್ಲಾ ವಿಷಯಗಳಲ್ಲೂ ನಿಖರತೆ ಮತ್ತು ದಕ್ಷತೆಯನ್ನು ಹೊಂದಿರುತ್ತಾರೆ. ಕನ್ಯಾರಾಶಿಯವರನ್ನು ಅತ್ಯುತ್ತಮ ಪ್ರೇಮಿ ಎಂದು ಕರೆಯುತ್ತಾರೆ. ಸ್ನೇಹಕ್ಕಾಗಿ ಏನೇ ಕಷ್ಟ ಬಂದರೂ ಅದನ್ನು ನಿಭಾಯಿಸುತ್ತಾರೆ. ಸ್ನೇಹದಲ್ಲಿ ಮತ್ತು ಪ್ರೀತಿಯಲ್ಲಿ ಪದೇ ಪದೇ ಮೋಸಹೋಗುತ್ತಾರೆ. ಈ ರಾಶಿಯವರು ತಾಯಿಯ ಎಲ್ಲಾ ಗುಣಗಳು ಮತ್ತು ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರು ಶಾಂತ, ಕಾಳಜಿಯುಳ್ಳ, ಪ್ರೀತಿಯ, ಜವಾಬ್ದಾರಿಯುತ ಪೋಷಕರಾಗುತ್ತಾರೆ.
ನಾನು ಹೇಳಿದ್ದೇ ನಡೆಯಬೇಕು ಎನ್ನುವ ಗುಣ ಇವರದ್ದು. ಈ ರಾಶಿಯವರು ಹಣ ಮತ್ತು ಅದೃಷ್ಠವನ್ನು ಗಳಿಸಲು ಏನೆಲ್ಲಾ ಮಾಡಬೇಕೆಂದರೆ ಸ್ಫೂರ್ತಿಯನ್ನು ತುಂಬಿ ಉತ್ಸಾಹವನ್ನು ಹೆಚ್ಚು ಮಾಡಲು, ಬೇಜಾರು ಮತ್ತು ಎದರಿಕೆಯಲ್ಲಿ ಜೀವನ ಮಾಡುತ್ತಿದ್ದರೇ ಧೈರ್ಯ ಕೊಡಲು ಪಚ್ಚೆ ಮತ್ತು ಎಮ್ರಾಲ್ಡ್ ಹರಳನ್ನು ಧರಿಸುವುದು ಉತ್ತಮ. ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಶುಕ್ರ ದ್ವಿತೀಯಾಧಿಪತಿಯಾಗಿರುವುದರಿಂದ ದುಡ್ಡಿಗಾಗಿ
ಮತ್ತು ಅದೃಷ್ಠಕ್ಕಾಗಿ ವಜ್ರವನ್ನು ಧರಿಸಬೇಕು. ಪಂಚಮಾಧಿಪತಿ ಶನಿ. ಖ್ಯಾತಿ ಮತ್ತು ನಾಲ್ಕು ಜನ ಗುರುತಿಸುವಂತೆ ಆಗಲು ಇಂದ್ರನೀಲ ಮಣಿಯನ್ನು ಧರಿಸಬೇಕು. ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿದರೂ ಶುಭವಾಗುತ್ತದೆ. ಈ ರಾಶಿಯವರು ಬನಶಂಕರಿ ಮತ್ತು ವಿಷ್ಣುವಿನ ಪೂಜೆ ಪ್ರಾರ್ಥನೆಯನ್ನು ಮಾಡಬೇಕು. ಈ ರಾಶಿಯ ಅಧಿಪತಿ ಬುಧನಾಗಿರುವುದರಿಂದ ಇಷ್ಟವಾದ ದಿನವನ್ನು ಬುಧವಾರವನ್ನಾಗಿ ಮಾಡಿಕೊಳ್ಳಬಹುದು. ಬುಧನನ್ನು ಪ್ರಸನ್ನಗೊಳಿಸಲು ಉತ್ತರಾಯಿಣಿ ವೃಕ್ಷವನ್ನು ಪೂಜೆ ಮಾಡಬೇಕು. ಸಂಪಿಗೆ ಮತ್ತು ಮಲ್ಲಿಗೆ ಗಿಡವನ್ನು ನೆಡುವುದರಿಂದ ಬುಧ ಗ್ರಹದಿಂದ ಉಂಟಾಗುವ ದೋಷವನ್ನು ನಿವಾರಿಸಿಕೊಳ್ಳಬಹುದು.