ಇದನ್ನು ನೋಡಿದ ನಂತರ ನೀವು ಜೀವನದಲ್ಲಿ ಬಡವರಾಗಿ ಇರಲು ಸಾಧ್ಯವೇ ಇಲ್ಲ!
ಒಂದು ಸಾರಿ ಗೌತಮ ಬುದ್ಧರು ತಮ್ಮ ಶಿಷ್ಯರ ಜೊತೆ ಸಂಚಾರ ಮಾಡುವಾಗ, ಒಂದು ಹಳ್ಳಿಯನ್ನು ಹಾದು ಹೋಗುವಾಗ, ತಮ್ಮ ಶಿಷ್ಯರ ಜೊತೆಗೆ ಆ ಹಳ್ಳಿಯಲ್ಲಿ ಕೆಲ ಸಮಯ ನೆಲೆಸಲು ನಿರ್ಧಾರ ಮಾಡಿದರು. ಬುದ್ಧರು ಹಳ್ಳಿಯಲ್ಲಿ ಇರುತ್ತಾರೆ ಎನ್ನುವ ವಿಚಾರ ಕಾಡ್ಗಿಚ್ಚಿನ ಹಾಗೆ ಇಡೀ ಹಳ್ಳಿಯಲ್ಲಿ ಹಬ್ಬಿತು. ಹಳ್ಳಿಯ ಜನರು ಬುದ್ಧರ ದರ್ಶನ ಪಡೆಯಲು ಬರಲು ಶುರು ಮಾಡಿದರು.
ತಮ್ಮ ಸಮಸ್ಯೆಗಳನ್ನು ಬುದ್ಧರ ಬಳಿ ಹೇಳಿ, ಅದಕ್ಕೆ ಪರಿಹಾರ ಪಡೆಯಲು ಬರುತ್ತಿದ್ದರು. ಬುದ್ಧರು ಸಹ, ಹಳ್ಳಿಯ ಜನರ ಸಮಸ್ಯೆಗಳನ್ನು ಕೇಳಿ ಅದಕ್ಕೆ ಪರಿಹಾರ ನೀಡುತ್ತಿದ್ದರು. ಹಳ್ಳಿಯಲ್ಲಿದ್ದ ಒಬ್ಬ ವ್ಯಕ್ತಿ ಬುದ್ಧರ ಬಳಿ ಬಂದು, ಪೂಜ್ಯರೇ ನಮ್ಮ ಹಳ್ಳಿಯಲ್ಲಿ ಎಲ್ಲರೂ ಕೂಡ ಕಷ್ಟಪಟ್ಟು ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ. ದೇವರು ನಮಗೆ ಕೊಟ್ಟಿರುವ ಎಲ್ಲದಕ್ಕೂ ದೇವರಿಗೆ ಧನ್ಯವಾದ ಹೇಳುತ್ತೇವೆ. ಆದರೇ ಒಬ್ಬ ವ್ಯಕ್ತಿ ಮಾತ್ರ ಯಾವುದೇ ಕೆಲಸ ಮಾಡದೇ, ತನ್ನ ಕಷ್ಟ ಮತ್ತು ಬಡತನಕ್ಕೆ ದೇವರೇ ಕಾರಣ ಎಂದು ದೇವರನ್ನು ಶಪಿಸುತ್ತಾನೆ.
ಸದಾ ದೇವರಿಗೆ ಶಾಪ ಹಾಕುತ್ತಾ ನಿಂದನೆ ಮಾಡುತ್ತಾ ಇರುತ್ತಾನೆ. ನಾವು ಅವನನ್ನು ತಡೆಯಲು ಹೋದರೇ ನಮ್ಮನ್ನು ಬಯ್ಯುತ್ತಾನೆ. ಏನು ಮಾಡಬೇಕೆಂದು ನಮಗೆ ತಿಳಿಯುತ್ತಿಲ್ಲ ಎನ್ನುತ್ತಾನೆ. ಆಗ ಬುದ್ಧನು ನಗುತ್ತಾ ಅವನನ್ನು ನನ್ನ ಬಳಿಗೆ ಕರೆತನ್ನಿ ಎಂದು ಹೇಳುತ್ತಾರೆ. ಆಗ ಮತ್ತೊಬ್ಬರು ಓ ಬುದ್ಧಿವಂತರೇ ಆತ ಒರಟು ಸ್ವಭಾವದ ವ್ಯಕ್ತಿ. ನಿಮ್ಮನ್ನು ನಿಂದಿಸಬಹುದು. ನಿಮ್ಮನ್ನು ಅವಮಾನ ಮಾಡುವುದನ್ನು ನಾವು ನೋಡಲಾಗುವುದಿಲ್ಲ. ಹಾಗಾಗಿ ಅವನನ್ನು ಇಲ್ಲಿಗೆ ಕರೆತರದೆ ಇರುವುದೇ ಒಳ್ಳೆಯದು ಎನ್ನುತ್ತಾರೆ. ಆಗ ಬುದ್ಧರು ನಗುತ್ತಾ, ನೀವು ಚಿಂತೆ ಮಾಡಬೇಡಿ ಅವನನ್ನು ನನ್ನ ಬಳಿಗೆ ಕರೆತನ್ನಿ,
ನಾನು ಅವನ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿ ಎನ್ನುತ್ತಾರೆ. ಬುದ್ಧರ ಮಾತುಗಳನ್ನು ಕೇಳಿದ ಕೆಲವು ಹಳ್ಳಿಯವರು, ಅವನನ್ನು ಕರೆತರಲು ಹೋಗುತ್ತಾರೆ. ಆ ವ್ಯಕ್ತಿ ಮೊದಲಿಗೆ ಬುದ್ಧ ಅವರ ಬಳಿ ಬರಲು ಒಪ್ಪಿಕೊಳ್ಳುವುದಿಲ್ಲ. ಎಲ್ಲಾ ಸನ್ಯಾಸಿಗಳು ಹೇಡಿಗಳು ಮತ್ತು ನಕಲಿ ಮನುಷ್ಯರಾಗಿರುತ್ತಾರೆ ನಾನು ಅವರ ಬಳಿಗೆ ಹೋಗುವುದಿಲ್ಲ ಎಂದು ಹೇಳುತ್ತಾನೆ. ಆಗ ಹಳ್ಳಿಯ ಜನರು ಬುದ್ಧ ಆತನ ತೊಂದರೆಗಳನ್ನು ಪರಿಹಾರ ಮಾಡುತ್ತಾರೆ ಎಂದು ಹೇಳಿದಾಗ, ಆತ ಬರಲು ಒಪ್ಪಿಕೊಳ್ಳುತ್ತಾನೆ.
ಬುದ್ಧರ ಬಳಿಗೆ ಹೋದ ನಂತರ, ಆ ವ್ಯಕ್ತಿಯು ಹೇಳಿ ಏನು ವಿಚಾರ, ನನ್ನನ್ನು ಯಾಕೆ ಇಲ್ಲಿಗೆ ಕರೆದಿದ್ದೀರಾ? ನೀವು ನನಗೆ ಏನನ್ನು ಹೇಳಬೇಕು? ನಿಮಗು ನಾನು ದೇವರನ್ನು ನಿಂದಿಸಬಾರದೇ? ನಾನು ದೇವರನ್ನು ಯಾಕೆ ನಿಂದಿಸಬಾರದು? ನನಗೆ ದೇವರು ಏನು ಕೊಟ್ಟಿದ್ದಾರೆ? ಉಪಯೋಗಕ್ಕೆ ಬಾರದ ಈ ದೇಹ ಕೊಟ್ಟಿದ್ಧಾರೆ. ಆದರೆ ದೇಹಕ್ಕೆ ಹಣ ಬೇಕು. ಆದರೇ ದೇವರು ನನಗೆ ಯಾಕೆ ಹಣ ಕೊಡಲಿಲ್ಲ? ಈ ಉಪಯೋಗವಿಲ್ಲದ ದೇಹ ಇಟ್ಟುಕೊಂಡು ನಾನು ಏನು ಮಾಡಲಿ?
ನೀವು ನನ್ನ ಹಣದ ಸಮಸ್ಯೆಯನ್ನು ಪರಿಹಾರ ಮಾಡುವುದಾದರೇ ಸರಿ. ಇಲ್ಲವಾದರೇ ನಿಮ್ಮ ಗಂಟುಮೂಟೆ ಕಟ್ಟಿಕೊಂಡು ಈ ಹಳ್ಳಿಯಿಂದ ಹೊರಹೋಗಿ. ಎಲ್ಲಾ ಸನ್ಯಾಸಿಗಳು ನಕಲಿ ಎಂದು ನನಗೆ ಗೊತ್ತು ಎನ್ನುತ್ತಾನೆ. ಅವನ ಮಾತುಗಳನ್ನು ಕೇಳಿ ಕೋಪ ಮಾಡಿಕೊಳ್ಳದೇ ಬುದ್ಧ ನಗುತ್ತಿದ್ದರು. ಆ ವ್ಯಕ್ತಿಗೆ ಬುದ್ಧ ಕೆಲವು ಮಾತುಗಳನ್ನು ಹೇಳಿದರು. ಗೆಳೆಯ ನಾನು ನಿನಗೆ ದೇವರನ್ನು ನಂಬು ಎಂದು ಹೇಳುತ್ತಿಲ್ಲ. ಅದೇ ರೀತಿ ದೇವರನ್ನು ನಂಬಬಾರದು ಎಂದು ಕೂಡ ಹೇಳುತ್ತಿಲ್ಲ.
ಒಬ್ಬ ವ್ಯಕ್ತಿಯ ಸಂತೋಷ ಮತ್ತು ದುಃಖ ಎರಡಕ್ಕೂ ಕಾರಣ ಆ ವ್ಯಕ್ತಿಯ ಕರ್ಮ. ಅದರಿಂದ ಮತ್ತೊಬ್ಬರಿಗೆ ಶಾಪ ಹಾಕುವುದಕ್ಕಿಂತ, ನೀನು ಕಷ್ಟಪಟ್ಟು ಕೆಲಸ ಮಾಡಿದರೇ ನಿನಗಿರುವ ಹಣದ ಸಮಸ್ಯೆ ಪರಿಹಾರವಾಗುತ್ತದೆ ಎನ್ನುತ್ತಾರೆ. ಬುದ್ಧರ ಮಾತುಗಳನ್ನು ಕೇಳಿ ಆ ವ್ಯಕ್ತಿ ಕೋಪಗೊಂಡು ನನಗೆ ನಿನ್ನ ಉಪದೇಶ ಬೇಕಿಲ್ಲ. ನನಗೆ ನೀನು ಹೇಡಿಯ ಹಾಗೆ ಕಾಣುತ್ತೀಯ. ನಾನು ಇಲ್ಲಿಗೆ ಬಂದಿದ್ದು ಹಣ ಸಿಗುತ್ತದೆ ಎನ್ನುವ ನಂಬಿಕೆಯಿಂದ, ನೀನು ನನ್ನ ಹಣದ ಸಮಸ್ಯೆಯನ್ನು ಪರಿಹಾರ ಮಾಡುವುದಾದರೇ ಹೇಳಿ ಇಲ್ಲವಾದರೇ ಇಲ್ಲಿಂದ ಜಾಗ ಖಾಲಿ ಮಾಡು ಎನ್ನುತ್ತಾನೆ.
ಈ ರೀತಿ ಹೇಳಿದರೇ ಈ ವ್ಯಕ್ತಿಗೆ ಅರ್ಥ ಆಗುವುದಿಲ್ಲ ಎಂದು ಬುದ್ಧರಿಗೆ ಅರ್ಥವಾಯಿತು. ಆಗ ಬುದ್ಧರು ನೋಡು ಗೆಳೆಯ ನನ್ನ ಬಳಿ ಹಣ ಇಲ್ಲ ನನಗೆ ಹಣದ ಅವಶ್ಯಕತೆಯೂ ಇಲ್ಲ. ಆದರೇ ನನಗೆ ಒಬ್ಬ ರಾಜ ಗೊತ್ತು. ಅವನಿಂದ ನಾನು ನಿನಗೆ ಹಣ ಕೊಡಿಸಬಹುದು. ಆದರೆ ಹಣಕ್ಕೆ ಪ್ರತಿಯಾಗಿ ನೀನು ರಾಜನಿಗೆ ಏನನ್ನಾದರೂ ಕೊಡಬೇಕು ಎನ್ನುತ್ತಾರೆ. ಆಗ ಆ ವ್ಯಕ್ತಿ ಏನು? ರಾಜನಿಗೆ ನಾನು ಏನನ್ನು ಕೊಡಲಾಗುತ್ತದೆ? ರಾಜನಿಗೆ ಕೊಡಲು ನನ್ನ ಬಳಿ ಏನು ಇಲ್ಲ” ಎನ್ನುತ್ತಾನೆ. ಆಗ ಬುದ್ಧರು ರಾಜನಿಗೆ ಒಬ್ಬ ಮಗನಿದ್ಧಾನೆ, ಅವನಿಗೆ ಹುಟ್ಟಿನಿಂದಲೂ ಕುರುಡು ಆಸ್ಥಾನದ ವೈದ್ಯರು ಜೀವಂತ ಇರುವ ವ್ಯಕ್ತಿಯ ಕಣ್ಣುಗಳು ಸಿಕ್ಕರೆ,
ರಾಜನ ಮಗನಿಗೆ ದೃಷ್ಟಿ ಬರುವ ಹಾಗೆ ಮಾಡಬಹುದು ಎಂದು ಹೇಳಿದ್ದಾರೆ. ನೀನು ನಿನ್ನ ಎರಡು ಕಣ್ಣುಗಳನ್ನು ರಾಜನ ಮಗನಿಗೆ ನೀಡಿದರೆ, ನಿನ್ನ ಇಡೀ ತೂಕದಷ್ಟು ಚಿನ್ನದ ನಾಣ್ಯಗಳನ್ನು ಕೊಡುತ್ತಾರೆ. ನಂತರ ನೀನು ನಿನ್ನ ಜೀವನವನ್ನು ಸುಲಭವಾಗಿ ಕಳೆಯಬಹುದು ಎನ್ನುತ್ತಾರೆ. ಮತ್ತೆ ಕೋಪಗೊಂಡ ಆ ವ್ಯಕ್ತಿ ನೀನು ಏನು ಹೇಳುತ್ತಿದ್ದೀಯಾ ನಾನು ನನ್ನ ಎರಡೂ ಕಣ್ಣುಗಳನ್ನು ಕೊಡಬೇಕಾ? ನಾನು ಯಾಕೆ ನನ್ನ ಕಣ್ಣನ್ನು ಯಾರಿಗಾದರು ಕೊಡಬೇಕು? ನಾನು ನನ್ನ ಕಣ್ಣನ್ನು ಯಾರಿಗೂ ಕೊಡುವುದಿಲ್ಲ. ಅವರು ಎಷ್ಟು ಹಣ ಕೊಟ್ಟರೂ ಸರಿ ನಾನು ನನ್ನ ಕಣ್ಣನ್ನು ಕೊಡುವುದಿಲ್ಲ ಎನ್ನುತ್ತಾನೆ. ಆಗ ಬುದ್ಧರು,
ಆದರೇ ಅದಕ್ಕೆ ಪ್ರತಿಯಾಗಿ ನಿನಗೆ ಸಾಕಷ್ಟು ಹಣ ಸಿಗುತ್ತದೆ. ನಿನಗೆ ಹಣ ಬೇಡವೇ? ಎನ್ನುತ್ತಾರೆ. ಆಗ ಆ ವ್ಯಕ್ತಿಯು ಹೌದು ನನಗೆ ಹಣ ಬೇಕು, ಆದರೇ ಹಣಕ್ಕಾಗಿ ನನ್ನ ಕಣ್ಣನ್ನು ಮಾರಾಟ ಮಾಡುವುದಿಲ್ಲ. ನನಗೆ ಕಣ್ಣೇ ಇಲ್ಲದೇ ಹೋದರೇ ಹಣ ಇಟ್ಟುಕೊಂಡು ನಾನು ಏನು ಮಾಡಲಿ? ಎನ್ನುತ್ತಾನೆ. ಆಗ ಬುದ್ಧರು ಸರಿ ಎರಡು ಕಣ್ಣುಗಳು ಅಲ್ಲದೇ ಹೋದರು, ಒಂದು ಕಣ್ಣನ್ನು ಕೊಟ್ಟರೂ ಕೂಡ ನಿನ್ನ ದೇಹದ ತೂಕದಷ್ಟು ಚಿನ್ನದ ನಾಣ್ಯಗಳನ್ನು ರಾಜನಿಂದ ಕೊಡಿಸುತ್ತೇನೆ ಎನ್ನುತ್ತಾರೆ.
ಆಗ ಆ ವ್ಯಕ್ತಿ ನಿನಗೆ ಹುಚ್ಚು ಹಿಡಿದಿದೆಯೇ? ಎಷ್ಟೇ ಚಿನ್ನದ ನಾಣ್ಯ ಕೊಟ್ಟರು ನಾನು ನನ್ನ ಒಂದು ಕಣ್ಣನ್ನು ಸಹ ಕೊಡುವುದಿಲ್ಲ. ನನ್ನ ಕಣ್ಣುಗಳಿಗೆ ಬೆಲೆ ಕಟ್ಟಲು ಆಗುವುದಿಲ್ಲ. ನನ್ನ ಕಣ್ಣುಗಳನ್ನು ಹೇಗೆ ಮಾರಾಟ ಮಾಡಲಿ ಎಂದು ಹೇಳುತ್ತಾನೆ. ಆಗ ಬುದ್ಧರು ನಿನ್ನ ಕಣ್ಣಿನ ಬೆಲೆ ಎಷ್ಟು ಎಂದು ಹೇಳು, ನಾನು ರಾಜನಿಂದ ಕೊಡಿಸುತ್ತೇನೆ ಎನ್ನುತ್ತಾರೆ. ಆಗ ಆ ವ್ಯಕ್ತಿಯು ಇಲ್ಲಿಗೆ ನಿಲ್ಲಿಸು, ನನ್ನ ಕಣ್ಣುಗಳು ಅಮೂಲ್ಯವಾದದ್ದು, ಈ ವಿಚಾರವನ್ನು ನೀನು ಇಲ್ಲಿಗೆ ಬಿಟ್ಟು ಬಿಡು, ನನಗೆ ಹಣ ಬೇಡ.
ಯಾವುದೇ ಕಾರಣಕ್ಕೂ ನಾನು ನನ್ನ ಕಣ್ಣುಗಳನ್ನು ಮಾರಾಟ ಮಾಡುವುದಿಲ್ಲ ಎನ್ನುತ್ತಾನೆ. ಆಗ ಬುದ್ಧರು ಗೆಳೆಯ ಕೆಲ ಸಮಯದ ಹಿಂದೆ ನೀನು ನಿನ್ನ ದೇಹವನ್ನು ಉಪಯೋಗಕ್ಕೆ ಬಾರದ್ದು ಎಂದು ಹೇಳುತ್ತಿದ್ದೆ. ಈಗ ನೀನು ನಿನ್ನ ಕಣ್ಣುಗಳು ಅಮೂಲ್ಯವಾದದ್ದು ಎಂದು ಹೇಳುತ್ತಿದ್ದೀಯಾ ನಿನ್ನ ದೇಹದ ಒಂದು ಪುಟ್ಟ ಅಂಗ ನಿನ್ನ ಕಣ್ಣುಗಳು, ನಿನ್ನ ಕಣ್ಣುಗಳು ಬೆಲೆ ಕಟ್ಟಲು ಸಾಧ್ಯವಾಗದೆ ಇರುವುದು ಎನ್ನುವುದಾದರೇ, ನಿನ್ನ ದೇಹ ಉಪಯೋಗಕ್ಕೆ ಬಾರದ ವಸ್ತು ಎಂದು ಹೇಗೆ ಹೇಳುತ್ತೀಯಾ? ಎನ್ನುತ್ತಾರೆ.
ಗೌತಮ ಬುದ್ಧರಿಂದ ಈ ಮಾತುಗಳನ್ನು ಕೇಳಿ, ಆತನ ಕಣ್ಣಿನಿಂದ ನೀರು ಬರಲು ಶುರುವಾದವು. ಆತ ಬುದ್ಧರ ಕಾಲುಗಳಿಗೆ ನಮಿಸಿ, ಅಳಲು ಶುರು ಮಾಡಿದನು. ಬುದ್ಧರು ಅವನನ್ನು ಮೇಲಕ್ಕೆ ಎತ್ತಿ, ಗೆಳೆಯ ಈ ಪ್ರಕೃತಿ ನಮಗೆ ಅಮೂಲ್ಯವಾದ ದೇಹವನ್ನು ನೀಡಿದೆ. ಆದರೇ ಬಹಳಷ್ಟು ಜನರು ಅದನ್ನು ನಿರ್ಲಕ್ಷಿಸಿ ತಮ್ಮ ಮೇಲೆ ತಾವೇ ಶಾಪ ಹಾಕುತ್ತಾರೆ. ಕೆಲ ನಿಮಿಷಗಳ ಹಿಂದೆ ನೀನು ನಿನ್ನ ದೇಹ ಉಪಯೋಗಕ್ಕೆ ಬಾರದ್ದು ಎಂದೇ ಈಗ ಅದು ಬೆಲೆ ಕಟ್ಟಲಾಗದ್ದು ಎನ್ನುತ್ತಿದ್ದೀಯಾ. ಮನುಷ್ಯರಿಗೆ ಏನೆಲ್ಲಾ ಉಚಿತವಾಗಿ ಸಿಗುತ್ತದೆಯೋ, ಅದರ ಬೆಲೆಯನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ.
ಹಾಗಾಗಿ ಈ ಅಮೂಲ್ಯವಾದ ದೇಹವನ್ನು ನಮಗೆ ಕೊಟ್ಟಿರುವುದಕ್ಕೆ ನಾವು ಈ ಪ್ರಕೃತಿಗೆ ಧನ್ಯವಾದ ಹೇಳಬೇಕು. ಈ ದೇಹವು ಬೇರೆ ಎಲ್ಲಾ ಜೀವರಾಶಿಗಳಿಗಿಂತ ಅತ್ಯುತ್ತಮವಾದದ್ದು ಎನ್ನುತ್ತಾರೆ ಗೌತಮ ಬುದ್ಧರು. ನಾವು ನಮ್ಮ ಸುತ್ತಮುತ್ತಲಿನವರ ಜೀವನದಲ್ಲಿ ಕೂಡ ಆಗಾಗ ಅವರು ಹತಾಶೆಗೊಂಡು ತಮ್ಮನ್ನು ತಾವು ಉಪಯೋಗಕ್ಕೆ ಬಾರದವರು ಎಂದುಕೊಳ್ಳುವುದನ್ನು ನೋಡುತ್ತೇವೆ ಆದರೇ ಈ ಮನುಷ್ಯನ ದೇಹ ಮತ್ತು ಈ ಜೀವ ಎರಡು ಸಹ ಪ್ರಕೃತಿಯ ಅಮೂಲ್ಯವಾದ ಉಡುಗೊರೆ ಎಂದು ಮರೆತು ಬಿಡುತ್ತಾರೆ. ಮನುಷ್ಯನ ದೇಹವು ಈ ಪ್ರಕೃತಿಯ ಅತ್ಯುತ್ತಮವಾದ ಸೃಷ್ಟಿ ಆಗಿದೆ.
ಏಕೆಂದರೆ ಮನುಷ್ಯರಿಗೆ ಮಾತ್ರ ಒಳ್ಳೆಯದು ಮತ್ತು ಕೆಟ್ಟದ್ದನ್ನು ಮಾಡುವ ಸ್ವಾತಂತ್ರ್ಯ ಇದೆ. ಮನುಷ್ಯನ ಮನಸ್ಸು ಮಾತ್ರ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧಾರ ಮಾಡುತ್ತದೆ. ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಆ ಸ್ವಾತಂತ್ರ್ಯ ಇಲ್ಲ. ಆದ್ದರಿಂದ ಇಂತಹ ಅಮೂಲ್ಯವಾದ ಮನುಷ್ಯ ಜನ್ಮವನ್ನು ನೀಡಿದ್ದಕ್ಕೆ ಆ ಅಪ್ರತಿಮ ಶಕ್ತಿಗೆ, ಧನ್ಯವಾದ ಹೇಳಲೇಬೇಕು. ನೀವು ಸಂತೋಷವಾಗಿರಲು ಬಯಸಿದರೇ ನಿಮ್ಮ ಬಳಿ ಇರುವ ವಸ್ತುಗಳನ್ನು ನೆನೆಯಿರಿ, ನಿಮ್ಮ ಬಳಿ ಇಲ್ಲದ ವಸ್ತುಗಳನ್ನು ನೆನೆಯಬೇಡಿ. ನೀವು ನಿಮ್ಮ ಮನುಷ್ಯ ಜನ್ಮ ಹಾಗೂ ನಿಮ್ಮ ಬಳಿ ಇರುವುದನ್ನು ನೆನೆದು ಸಂತೋಷವಾಗಿರುತ್ತೀರಾ ಅಥವಾ ನಿಮ್ಮ ಬಳಿ ಇಲ್ಲದೇ ಇರುವುದರ ಬಗ್ಗೆ ಚಿಂತೆ ಮಾಡಿ ದುಃಖದಲ್ಲಿ ಇರುತ್ತೀರಾ? ಎನ್ನುವುದನ್ನು ನೀವೇ ತೀರ್ಮಾನ ಮಾಡಬೇಕು. ಈ ತೀರ್ಮಾನ ಕೇವಲ ನಿಮ್ಮದು ಮಾತ್ರ ಆಗಿರುತ್ತದೆ.