ನಾವು ಈ ಲೇಖನದಲ್ಲಿ ಈ ರೀತಿಯ ಪಕ್ಷಿಗಳು ಮನೆಯೊಳಗೆ ಬರುವುದರಿಂದ ಯಾವ ಸೂಚನೆಗಳು ಸಿಗುತ್ತವೆ ಎಂಬುವುದನ್ನು ನೋಡೋಣ . ಅನೇಕ ಮಂದಿಗೆ ಯಾವ ಯಾವ ಪಕ್ಷಿಗಳು ಎದುರಾದರೆ ಅಥವಾ ನಮ್ಮ ಮನೆಗಳಿಗೆ ಬಂದರೆ , ಅದು ಶುಭ ಸೂಚಕವೋ ಅಥವಾ ಹಾನಿಕಾರಕವೋ , ಗೊತ್ತಿರುವುದಿಲ್ಲ . ನಮ್ಮ ಶಾಸ್ತ್ರ ಪುರಾಣಗಳಲ್ಲಿ ಮನೆಯೊಳಗೆ ಪಕ್ಷಿಗಳು ಬಂದರೆ , ಒಳ್ಳೆಯದಾಗುತ್ತದೆ . ಅದೊಂದು ಶುಭ ಸೂಚನೆ . ವ್ಯಾಪಾರ ವ್ಯವಹಾರಗಳಲ್ಲಿ ಲಾಭವನ್ನು ಗಳಿಸಬಹುದು.
ಇನ್ನು ನೀವು ಪ್ರಯಾಣಿಸಬೇಕಾದರೆ ಕೆಲವು ಪಕ್ಷಿಗಳು ಎದುರಾದರೆ ಅವುಗಳು ಎಂತಹ ಸಂಕೇತಗಳನ್ನು ಕೊಡುತ್ತವೆ ಎಂದು ಇಲ್ಲಿ ನಾವು ತಿಳಿಯೋಣ . ಬಹಳ ಮಂದಿ ಇವುಗಳನ್ನು ಮೂಢನಂಬಿಕೆ ಎಂದು ತಳ್ಳಿ ಹಾಕುತ್ತಾರೆ . ಆದರೆ ನಮ್ಮ ಶಾಸ್ತ್ರ ಪುರಾಣಗಳಲ್ಲಿ ಇವುಗಳ ಬಗ್ಗೆ ಉಲ್ಲೇಖವಿದ್ದು , ನಮ್ಮ ಹಿರಿಯರು ಹಿಂದಿನ ಕಾಲದಿಂದಲೂ ಇದನ್ನು ನಂಬುತ್ತಿದ್ದಾರೆ ಮತ್ತು ಪಾಲಿಸುತ್ತಿದ್ದಾರೆ .ಅವರು ಏನೇ ಮಾಡಿದರೂ ಕೂಡ ಅದರ ಹಿಂದೆ ಯಾವುದೋ ಒಂದು ಆಂತರ್ಯ ಅಡಗಿರುತ್ತದೆ.
ವೈಜ್ಞಾನಿಕ ದೃಷ್ಟಿಯಿಂದಲೂ ಕೂಡ ಅದು ಮನುಷ್ಯರಿಗೆ ಸಹಾಯವಾಗುತ್ತದೆ . ಆದ್ದರಿಂದ ನಾವು ಕೂಡ ಇದನ್ನು ಪಾಲಿಸಬೇಕು . ಯಾವ ಯಾವ ಪಕ್ಷಿಗಳು ನಮ್ಮ ಮನೆಯೊಳಗೆ ಬಂದರೆ ಶುಭ ಅಥವಾ ಅಶುಭ ಫಲಗಳನ್ನು ಸೂಚಿಸುತ್ತವೆ . ಹಾಗೆಯೇ ಕೆಲವು ಕೀಟಗಳು ಹಾಗಾಗ್ಗೆ ನಮ್ಮ ಮನೆಗಳಲ್ಲಿ ಕಾಣಿಸುತ್ತಿದ್ದರೆ , ಅದು ಒಳ್ಳೆಯ ಶುಭ ಸೂಚನೆಯೂ ಅಥವಾ ಹಾನಿಕಾರಕವೋ ಎಂದು ಬಹಳ ಮಂದಿಗೆ ಅನೇಕ ರೀತಿಯ ಸಂದೇಹಗಳು ಬರುತ್ತಿರುತ್ತವೆ . ಅವುಗಳಲ್ಲಿ ಕೆಲವೊಂದನ್ನು ಒಂದೊಂದಾಗಿ ತಿಳಿಯೋಣ.
ಮೊದಲನೆಯದಾಗಿ ಗುಬ್ಬಚ್ಚಿಗಳು . ಈ ಗುಬ್ಬಚ್ಚಿಗಳು ಪದೇ ಪದೇ ಮನೆಯೊಳಗೆ ಬರುತ್ತಿದ್ದರೆ , ಇದೊಂದು ಶುಭ ಸೂಚನೆ . ನಿಮಗೆ ಲಕ್ಷ್ಮಿ ಕಟಾಕ್ಷ ಲಭಿಸುತ್ತದೆ ಎಂದರ್ಥ .ಒಂದು ವೇಳೆ ಮೊದಲೇ ನಿಮಗೆ ಬೇಕಾದಷ್ಟು ಹಣವಿದ್ದರೂ ಕೂಡ , ಅದು ಮತ್ತಷ್ಟು ಬೆಳೆಯುತ್ತದೆ ಎಂದು ಅರ್ಥ .ಒಂದು ಗುಬ್ಬಚ್ಚಿ ಬಂದರೆ ಈ ಅರ್ಥ . ಅದೇ ಜೋಡಿಯಾಗಿ ಅಂದರೆ ಎರಡು ಗುಬ್ಬಚ್ಚಿ ಒಂದೇ ಭಾರಿ ನಿಮ್ಮ ಮನೆ ಒಳಗೆ ಬಂದರೆ , ಆ ಮನೆಯಲ್ಲಿ ಆದಷ್ಟು ಬೇಗ ಶುಭ ಕಾರ್ಯ ನಡೆಯುತ್ತದೆ
ಎಂದು ಮತ್ತು ಆ ಮನೆಯಲ್ಲಿ ಮದುವೆ ಆಗಬೇಕಾದವರು ಇದ್ದರೆ ಬೇಗ ವಿವಾಹ ಕೂಡಿ ಬರುತ್ತದೆ ಎಂದರ್ಥ . ಹಾಗೆಯೇ ನೂತನ ದಂಪತಿಗಳು ಆ ಮನೆಯಲ್ಲಿ ಇದ್ದರೆ , ಅವರಿಗೆ ಸಂತಾನ ಯೋಗವು ಸಿದ್ಧಿಸುತ್ತದೆ . ಆದ್ದರಿಂದ ಗುಬ್ಬಚ್ಚಿಗಳು ಮನೆಯ ಒಳಗಡೆ ಬಂದರೆ ಬಹಳ ಒಳ್ಳೆಯದು . ಇನ್ನು ನಿಮಗೆ ಅನುಕೂಲವಿದ್ದರೆ ಸಾಧ್ಯವಾದರೆ , ಮನೆಯ ಬಳಿ ಅವುಗಳಿಗೆ ಆಹಾರ ಮತ್ತು ನೀರನ್ನು ಒದಗಿಸುವ ಪ್ರಯತ್ನ ಮಾಡಿ . ಇದು ತುಂಬಾ ಒಳ್ಳೆಯ ಕೆಲಸ .
ಎರಡನೆಯದು ಕಾಗೆ .ನಮ್ಮಲ್ಲಿ ಅನೇಕ ಮಂದಿ ಈ ಕಾಗೆಯನ್ನು ನೋಡಿದರೆ ಇಲ್ಲ ಸಲ್ಲದ ಅನುಮಾನಗಳು ಅವರ ಮನಸ್ಸಿನಲ್ಲಿ ಸುಳಿದಾಡುತ್ತಿರುತ್ತದೆ . ಕಾಗೆ ಮನೆಗೆ ಬಂದರೆ ಇದು ಒಳ್ಳೆಯದೋ , ಕೆಟ್ಟದ್ದೋ, ಎಂದು ಭಯ ಭೀತರಾಗುತ್ತಾರೆ .ಹಾಗೆ ಇನ್ನು ನಮ್ಮ ಪಿತೃ ದೇವತೆಗಳ ಸ್ವರೂಪ ಎಂದು ನಮ್ಮ ಶಾಸ್ತ್ರ ಪುರಾಣಗಳಲ್ಲಿ ಹೇಳಲಾಗಿದೆ . ಹಾಗೆಯೇ ಈ ವಿಷಯ ನಮ್ಮೆಲ್ಲರಿಗೂ ತಿಳಿದಿದೆ . ಕಾಗೆಗಳು ಪದೇಪದೇ ನಿಮ್ಮ ಮನೆಗೆ ಬರುತ್ತಿದ್ದರೆ , ಪಿತೃ ದೇವರುಗಳು ನಿಮ್ಮನ್ನು ನೋಡಿ ಆನಂದ ಪಡುತ್ತಿದ್ದಾರೆ ಎಂದರ್ಥ .
ನೀವು ಎಲ್ಲಿಗಾದರೂ ಪ್ರಯಾಣಿಸಬೇಕಾದರೆ ಕಾಗೆ ಎದುರಿಗೆ ಬರುವುದಾಗಲಿ, ಅಥವಾ ನಿಮ್ಮ ತಲೆಯನ್ನು ಸ್ಪರ್ಶಿಸಿ ಹೋಗಿದೆ ಎಂದರೆ ಅದು ನಿಮಗೆ ಎಚ್ಚರಿಕೆಯನ್ನು ನೀಡುತ್ತಿದೆ ಎಂದರ್ಥ . ನಿಮ್ಮ ಪ್ರಯಾಣದಲ್ಲಿ ಯಾವುದಾದರೂ ಕೆಡುಕು ಆಗಬಹುದೆಂದು ನಿಮ್ಮ ಪಿತೃ ದೇವರುಗಳು ನಿಮಗೆ ಸೂಚಿಸುತ್ತಿದ್ದಾರೆ ಎಂದರ್ಥ . ಆದ್ದರಿಂದ ನೀವು ಭಯಪಡದೆ ಮುಂಚೆಯೇ ಈ ಸೂಚನೆ ಸಿಕ್ಕಿರುವುದರಿಂದ ನಿಮ್ಮ ಪ್ರಯಾಣವನ್ನು ಅಥವಾ ಕೈಗೊಂಡಿರುವಂತಹ ಕಾರ್ಯವನ್ನು ನಿಲ್ಲಿಸುವುದು ಒಳ್ಳೆಯದು . ಇಲ್ಲವಾದರೆ ಬಹಳ ಜಾಗೃತೆಯಿಂದ ಜಾಣ್ಮೆಯಿಂದ ಮುನ್ನಡೆಯಬೇಕು .
ಮೂರನೆಯದಾಗಿ ಗೂಬೆ .ನಮ್ಮಲ್ಲಿ ಹಲವಾರು ಮಂದಿ ಈ ಗೂಬೆಯನ್ನು ನೋಡಿದರೆ , ಭಯ ಬೀಳುತ್ತಿರುತ್ತಾರೆ . ಅದು ನೋಡುವುದಕ್ಕೆ ವಿಚಿತ್ರವಾಗಿ ಇರುತ್ತದೆ . ಯಾರು ಕೂಡ ಅದನ್ನು ನೋಡಲು ಇಷ್ಟಪಡುವುದಿಲ್ಲ . ಆದರೆ ಅದೇ ಗೂಬೆಯು ನಿಮ್ಮ ಮನೆಯೊಳಗೆ ಪ್ರವೇಶ ಮಾಡಿದರೆ ನೀವು ಬಹಳ ಅದೃಷ್ಟವಂತರು . ಏನಿದು ವಿರುದ್ಧವಾಗಿ ಹೇಳುತ್ತಿದ್ದಾರೆ ಅಂದುಕೊಂಡರೆ , ನಮ್ಮಲ್ಲಿ ಬಹಳ ಮಂದಿಗೆ ತಿಳಿಯದೆ ಇರುವ ವಿಷಯವೇನೆಂದರೆ , ಈ ಗೂಬೆಯು ತಾಯಿ ಲಕ್ಷ್ಮೀದೇವಿಯ ವಾಹನ .ಆದ್ದರಿಂದ ಲಕ್ಷ್ಮೀದೇವಿಯ ವಾಹನವೇ ಸ್ವತಹ ನಿಮ್ಮ ಮನೆಗೆ ಬಂದಿದೆ ಎಂದರೆ , ಅದಕ್ಕಿಂತಲೂ ಅದೃಷ್ಟ ಏನಿರುತ್ತದೆ .
ನಿಮಗೆ ಲಕ್ಷ್ಮಿ ಕಟಾಕ್ಷವು ಸಿದ್ಧಿಸುತ್ತದೆ ಎಂದರ್ಥ . ದೊಡ್ಡ ದೊಡ್ಡ ವ್ಯಕ್ತಿಗಳು, ಗೌರವಾನ್ವಿತರು , ಮತ್ತು ವಿಐಪಿ ಗಳು ಎಲ್ಲಿಗಾದರೂ ಸಾಧಾರಣ ಸ್ಥಳಗಳಿಗೆ ಬರುತ್ತಿದ್ದಾರೆ ಎಂದರೆ , ಅವರಿಗಿಂತಲೂ ಮೊದಲೇ ಅವರ ಹಿತೈಷಿಗಳು ಅಥವಾ ಅವರ ಕೆಲಸಗಾರರು ಆ ಸ್ಥಳಕ್ಕೆ ಬಂದು ಅಲ್ಲಿ ಸ್ಥಳ ಪರಿಶೀಲನೆ ಮಾಡಿ ಎಲ್ಲವೂ ಸರಿ ಇದೆಯಾ ಎಂದು ನೋಡಿ ಹೋಗುತ್ತಾರೆ . ಆ ನಂತರ ಅಷ್ಟೇ ಆ ಗೌರವಾನ್ವಿತರು ಬರುತ್ತಾರೆ .ಇಲ್ಲೂ ಕೂಡ ಅದೇ ರೀತಿಯಾಗಿ ಗೂಬೆ ಮುಂಚೆಯೇ ಬಂದು ಎಲ್ಲವನ್ನು ಪರಿಶೀಲಿಸುತ್ತದೆ . ಆ ನಂತರ ತಾಯಿ ಲಕ್ಷ್ಮಿ ದೇವಿಯು ಪ್ರವೇಶ ಮಾಡುತ್ತಾಳೆ . ಲಕ್ಷ್ಮಿ ಕಟಾಕ್ಷವು ನಿಮ್ಮ ಕುಟುಂಬಕ್ಕೆ ಆದಷ್ಟು ಬೇಗ ಲಭಿಸುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕೆಂದು ಪಂಡಿತರು ಹೇಳುತ್ತಾರೆ .
ನಾಲ್ಕನೆಯದಾಗಿ ಹಾವು .ಈ ಹಾವು ಮನೆಯೊಳಗೆ ಪ್ರವೇಶ ಮಾಡಿದರೆ , ಅದು ಅಶುಭ . ಆ ಮನೆಯ ಕುಟುಂಬ ಸದಸ್ಯರಿಗೆ ಮಾನಸಿಕ ವ್ಯಥೆ ಮತ್ತು ವೇದನೆ ಶುರುವಾಗುತ್ತದೆ ಎಂದರ್ಥ . ಅವರು ಅಶಾಂತಿಗೆ ಗುರಿಯಾಗುತ್ತಾರೆ . ಅವರು ಯಾವುದೇ ಕಾರ್ಯ ಕೈಗೊಂಡರು ಕೂಡ ಅದು ಕೈ ಗೂಡುವುದಿಲ್ಲ. ಆದ್ದರಿಂದ ಈ ವಿಷಯದಲ್ಲಿ ಆದಷ್ಟು ಜಾಗ್ರತೆಯಿಂದ ಇರಬೇಕು . ಹಾವುಗಳು ಮೊದಲೇ ವಿಷಕಾರಿ ಜಂತು ಆಗಿರುವುದರಿಂದ , ಅವುಗಳು ಮನೆಯೊಳಗೆ ಬರದಿರುವ ಹಾಗೆ ಆದಷ್ಟು ಜಾಗ್ರತೆ ವಹಿಸಬೇಕು .
5 ನೇ ಯದು ಕಣಜಗಳು . ಕಣಜಗಳು ಮನೆಯೊಳಗಡೆ ಪ್ರವೇಶ ಮಾಡುವುದು ಒಳ್ಳೆಯ ಸೂಚನೆ .ಕೆಲಸದಲ್ಲಿ ಬಡ್ತಿ ಸಿಗುವ ಅವಕಾಶಗಳು ದೊರೆಯುತ್ತವೆ . ಇವುಗಳನ್ನು ಲಕ್ಷ್ಮಿ ದೇವಿಯ ಸೇವಕರು ಎಂದು ಹೇಳಲಾಗುತ್ತದೆ .ಇವುಗಳು ನಮ್ಮ ಮನೆಯ ಕಿಟಕಿಯ ಬಳಿ ಬಾಗಿಲ ಬಳಿ ಗೂಡು ಕಟ್ಟುತ್ತಿರುತ್ತವೆ . ನಮಗೆ ತಿಳಿಯದೆ ಬಹಳ ಮಂದಿ ಆ ಗೂಡುಗಳನ್ನು ಕಿತ್ತು ಬೀಸಾಕುತ್ತಾರೆ . ಆದರೆ ಹಾಗೆ ಮಾಡಬಾರದು . ಹೀಗೆ ಮನೆಯಲ್ಲಿ ಅವುಗಳು ಗೂಡು ಕಟ್ಟುವುದು ಬಹಳ ಒಳ್ಳೆಯದೆಂದು ದೊಡ್ಡ ಮೊತ್ತದಲ್ಲಿ ಹಣ ಬರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ . ಹಾಗೆ ಗೂಡು ಕಟ್ಟಿ ಆ ಗೂಡಿನಿಂದ ಕಣಜಗಳೆಲ್ಲಾ ಹೊರಟು ಹೋದ ಮೇಲೆ ಖಾಲಿ ಗೂಡಿಗೆ ಸ್ವಲ್ಪ ನೀರನ್ನು ಹಾಕಿ ಆ ಮ್ಮಣ್ಣನ್ನು ನಿಮ್ಮ ಹಣೆಗೆ ಇಟ್ಟುಕೊಳ್ಳುವುದರಿಂದ ದೃಷ್ಟಿ ದೋಷಗಳು ತೊಲಗಿ ಹೋಗುತ್ತವೆ ಎಂದು ಕೂಡ ಹೇಳುತ್ತಾರೆ.
ಆರನೇಯದು ಹಲ್ಲಿ . ಹಲ್ಲಿಗಳು ಇಲ್ಲದ ಮನೆಗಳೇ ಇರುವುದಿಲ್ಲ ಎಂದು ಹೇಳಬಹುದು .ಪ್ರತಿ ಮನೆಗಳಲ್ಲಿಯೂ ಕೂಡ ಸರ್ವೇ ಸಾಮಾನ್ಯವಾಗಿ ಈ ಹಲ್ಲಿಗಳು ಇರುತ್ತವೆ . ಈ ಹಲ್ಲಿಗಳನ್ನು ಕೂಡ ಶಾಸ್ತ್ರೀಯವಾಗಿ ಮತ್ತು ವೈಜ್ಞಾನಿಕವಾಗಿ ಕೂಡ ಮಾನವ ಸ್ನೇಹಿ ಎಂದು ಹೇಳುತ್ತಾರೆ . ಮನೆಯ ಗೋಡೆಗಳ ಮೇಲೆ ಅತಿ ಸಣ್ಣ ಸಣ್ಣ ಕೀಟಗಳು ಮತ್ತು ಇರುವೆಗಳನ್ನು ಇವು ತಿಂದು ಹಾಕುತ್ತವೆ . ನಾವು ಯಾವುದಾದರೂ ಮಹತ್ವದ ನಿರ್ಣಯಗಳನ್ನು ತೆಗೆದು ಕೊಳ್ಳಬೇಕಾದರೆ ಅಥವಾ ನಾವು ಪ್ರಯಾಣಕ್ಕೆ ಹೋಗಬೇಕಾದರೆ ಈ ಹಲ್ಲಿಗಳು ಶಬ್ದ ಮಾಡಿದರೆ , ಅದು ಬಹಳ ಶುಭ ಸೂಚನೆ ಎಂದು ನಮ್ಮ ಹಿರಿಯರು ಹೇಳುತ್ತಾರೆ .
ಏಳನೇಯದು ಮಿಡತೆ .ಇವು ಹೆಚ್ಚಾಗಿ ಹೊಲ ಗದ್ದೆಗಳಲ್ಲಿ ಇರುತ್ತವೆ . ಮಳೆಗಾಲದಲ್ಲಿ ಹೆಚ್ಚಾಗಿ ಹುಲ್ಲುಗಾವಲುಗಳಲ್ಲಿ ಕಾಣಿಸುತ್ತವೆ .ನೀವು ಸಂಜೆ ಸಮಯದಲ್ಲಿ ನಿಮ್ಮ ಮನೆಗಳಿಗೆ ಪ್ರವೇಶ ಮಾಡಿದರೆ , ಅದು ಬಹಳ ಶುಭ ಸೂಚನೆ .ಇದು ನೋಡುವುದಕ್ಕೆ ಹಸಿರಾಗಿ ಇರುತ್ತದೆ . ಹೊಲ ಗದ್ದೆಗಳಿಗೆ ಇವುಗಳಿಂದ ಹಾನಿ ಎಂದು ಹೇಳುತ್ತಾರೆ . ಆದರೆ ಇದು ನಮ್ಮ ಮನೆ ಒಳಗಡೆ ಬಂದರೆ ಅದೃಷ್ಟ ಕೂಡಿ ಬರುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ .
ಎಂಟನೇದು ಚಿಟ್ಟೆಗಳು .ಈ ಚಿಟ್ಟೆಗಳು ಹೆಚ್ಚಾಗಿ ಹೂವು ಇರುವ ಪ್ರದೇಶಗಳಲ್ಲಿ ಇರುತ್ತವೆ . ಸಾಮಾನ್ಯವಾಗಿ ಅಲ್ಲಿ ಸುವಾಸನೆ ಬೀರುತ್ತಿರುತ್ತದೆ . ಒಂದು ಒಳ್ಳೆಯ ಆಹ್ಲಾದಕರ ವಾತಾವರಣ ಅಲ್ಲಿ ಇರುತ್ತದೆ . ಆದ್ದರಿಂದ ಚಿಟ್ಟೆಗಳು ಅಲ್ಲಿ ಇರುತ್ತವೆ . ಚಿಟ್ಟೆಗಳು ನಮ್ಮ ಮನೆಯ ಒಳಗಡೆ ಬಂದರೆ , ಅಂತಹುದೇ ವಾತಾವರಣ ಮನೆಯಲ್ಲಿ ಕೂಡ ಇರುತ್ತದೆ ಎಂದರ್ಥ . ಹೀಗೆ ಈ ಚಿಟ್ಟೆಗಳು ಮನೆಯ ಒಳಗಡೆ ಬರುವುದರಿಂದ ಬಹಳ ಅಂದರೆ ಬಹಳ ಶುಭ ಸೂಚಕ . ನಿಮ್ಮ ಎಲ್ಲಾ ಕೋರಿಕೆಗಳು ನೆರವೇರುತ್ತವೆ . ಆರ್ಥಿಕವಾಗಿ , ಸಾಮಾಜಿಕವಾಗಿ ಮತ್ತು ಕೌಟುಂಬಿಕವಾಗಿ ಯಾವುದೇ ರೀತಿಯ ತೊಂದರೆಗಳಿದ್ದರೂ ಕೂಡ ಆದಷ್ಟು ಬೇಗ ನಿವಾರಣೆಯಾಗುತ್ತದೆ ಎಂದು ಸೂಚಿಸುತ್ತದೆ .
ಕೊನೆಯದಾಗಿ ಚೇಳು .ಕೆಲವೊಂದು ಮನೆಗಳಲ್ಲಿ ಆಗಾಗ್ಗೆ ಈ ಚೇಳುಗಳು ಕಾಣಿಸಿಕೊಳ್ಳುತ್ತವೆ . ಇವು ಮನೆಯಲ್ಲಿ ಕಾಣಿಸುವುದು ಒಳ್ಳೆಯದಲ್ಲ . ಇದೊಂದು ಅಶುಭ ಸೂಚನೆ . ಇದು ಹೆಚ್ಚಾಗಿ ತೇವಾಂಶ ಮತ್ತು ಅಶುಭ್ರತೆ ಇರುವ ಕಡೆ ಕಾಣಿಸಿಕೊಳ್ಳುತ್ತದೆ .ಯಾವ ಜಾಗದಲ್ಲಿ ಹೆಚ್ಚಾಗಿ ಬ್ಯಾಕ್ಟೀರಿಯಾ ಗಳು ಇರುತ್ತವೋ ಅಲ್ಲಿ ಇವು ಬರುವ ಅವಕಾಶಗಳು ಇರುತ್ತವೆ . ಇಂತಹ ಮನೆಗಳಿಗೆ ಲಕ್ಷ್ಮಿ ದೇವಿಯ ಅನುಗ್ರಹ ಇರೋದಿಲ್ಲ . ಮನೆಯಲ್ಲಿ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ .
ಕುಟುಂಬದಲ್ಲಿ ಕಲಹಗಳು ಹೆಚ್ಚಾಗುತ್ತದೆ . ಕೈಗೊಂಡ ಕೆಲಸ ಕಾರ್ಯಗಳು ಅರ್ಧದಲ್ಲಿ ನಿಂತು ಹೋಗುವ ಸಾಧ್ಯತೆ ಇರುತ್ತದೆ . ಆದ್ದರಿಂದ ಅವುಗಳ ಬರುವಿಕೆಗೆ ಅವಕಾಶ ಮಾಡಿಕೊಡದೆ ಮನೆಯ ಮೂಲೆ ಮೂಲೆಗಳನ್ನು ಆದಷ್ಟು ಶುಭ್ರವಾಗಿ ಇಟ್ಟುಕೊಳ್ಳುವುದು ಉತ್ತಮ .ಇದು ಶುಭವೋ ಅಥವಾ ಅಶುಭವೋ ಎಂಬುದನ್ನು ಪಕ್ಕದಲ್ಲಿ ಇರಿಸಿದರೆ, ಮನೆಯಲ್ಲಿ ಚಿಕ್ಕ ಮಕ್ಕಳು ಹಾಗೆಯೇ ವಯಸ್ಸಾದ ಹಿರಿಯರು ಕೂಡ ಇರುತ್ತಾರೆ . ಈ ಕೀಟಗಳು ವಿಷಕಾರಿ ಆಗಿರುವುದರಿಂದ ಆದಷ್ಟು ಜಾಗ್ರತೆ ವಹಿಸಬೇಕು . ಮತ್ತು ಎಚ್ಚರ ವಹಿಸಬೇಕು ಎಂದು ಹೇಳಲಾಗಿದೆ .