ಮದುವೆಯಾದ ಹೆಣ್ಣು ಮಕ್ಕಳು ಮುತ್ತೈದೆಯ ಭಾಗ್ಯ ಪಡೆದುಕೊಂಡಿದ್ದು ಕಾಲುಂಗುರ, ಮಾಂಗಲ್ಯವನ್ನು ತೆಗೆದು ಇಡಬಾರದು ಹಾಗೆಯೇ ಮನೆಯಿಂದ ಹೊರಗಡೆ ಹೋಗಬಾರದು. ಇದರಿಂದ ಲಕ್ಷ್ಮೀ ದೇವಿಯ ಕೃಪಾಕಟಾಕ್ಷದಿಂದ ವಂಚಿತರಾಗುವಿರಿ.
ದೇವರಿಗೆ ಉಪಯೋಗಿಸುವ ಅರಿಶಿಣ ಮತ್ತು ಕುಂಕುಮವನ್ನು ಮನೆಗೆ ಬಂದ ಮುತ್ತೈದೆಯರಿಗೆ ಕೊಡಬಾರದು. ಏಕೆಂದರೆ ದೇವರ ಕುಂಕುಮ ಮಡಿಯಾಗಿರಬೇಕು.
ಮನೆಯೊಳಗೆ ಹೆಣ್ಣು ಮಕ್ಕಳು ಕೂದಲನ್ನು ಕೆದರಿಕೊಂಡು ಇರಬಾರದು. ಇದರಿಂದ ದಾರಿದ್ರ್ಯ ಬರುವುದು. ಲಕ್ಷ್ಮಿಯ ಅವಕೃಪೆಗೆ ಒಳಗಾಗುವಿರಿ.
ನೀವು ಊಟ ಮಾಡುವ ಸಮಯದಲ್ಲಿ ಮನೆಗೆ ಯಾರಾದರೂ ಬಂದರೆ ಅವರಿಗೆ ಎಂಜಲು ಕೈಯಿಂದ ಏನನ್ನು ಕೊಡಬೇಡಿ. ಕೈ ತೊಳೆದುಕೊಂಡು ಕೊಡಿ. ಹಾಗೆಯೇ ಊಟದ ತಟ್ಟೆಯನ್ನು ಎಂಜಲು ಕೈಯಿಂದ ಎತ್ತಬೇಡಿ. ಕೈ ತೊಳೆದುಕೊಂಡು ತೆಗೆಯಬೇಕು.
ಮನೆಯಲ್ಲಿ ಕೆಟ್ಟ ಪದಗಳನ್ನು ಬಳಕೆ ಮಾಡುವುದು, ಜಗಳ ಮಾಡುವುದು, ಕಣ್ಣೀರು ಹಾಕುವುದು ಒಳ್ಳೆಯದಲ್ಲ. ಇದರಿಂದ ದಾರಿದ್ರ್ಯ ಬರುವುದು.
ದೇವರ ಪೂಜೆಯನ್ನು ಮಾಡುತ್ತಾ ನಿಮಗೆ ಗೊತ್ತಿರುವ ದೇವರ ನಾಮ, ಸ್ತೋತ್ರ, ಮಂತ್ರಗಳನ್ನು ಪಠಿಸಿ. ಇದರಿಂದ ಮನಸ್ಸು ಪ್ರಶಾಂತವಾಗುವುದು. ಮನಸ್ಸಿನ ಗೊಂದಲಗಳು ಕಡಿಮೆಯಾಗುವುದು. ಜೊತೆಗೆ ಗಂಟೆಯನ್ನು ಬಾರಿಸಿ. ಗಂಟೆಯ ನಾದದಿಂದ ನಕಾರಾತ್ಮಕ ಶಕ್ತಿಗಳು ಹೊರಗೆ ಹೋಗುವುದು.
ಯಾವುದೇ ಕಾರಣಕ್ಕೂ ಆಹಾರವು ಕೆಳಗೆ ಬೀಳದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಬಿದ್ದರೂ ಯಾರ ಕಾಲಿಗೂ ಹತ್ತುವುದಕ್ಕೆ ಮುಂಚೆ ತೆಗೆದುಬಿಡಿ. ಮನೆಯಲ್ಲಿ ಚಿಕ್ಕ ಮಕ್ಕಳಿಗೂ ಇದನ್ನು ಹೇಳಿಕೊಡಿ. ನಾವು ಅನ್ನಕ್ಕೆ ಗೌರವ ಕೊಟ್ಟರೆ ಅನ್ನಪೂರ್ಣೇಶ್ವರಿಯ ಆಶೀರ್ವಾದ ಸದಾ ನಮ್ಮ ಮೇಲೆ ಇರುತ್ತದೆ.
ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ. ಊಟದ ತಟ್ಟೆಯಲ್ಲಿ ಆಹಾರವನ್ನು ಬಿಡಬಾರದು. ಊಟವಾದ ನಂತರ ತಟ್ಟೆಯನ್ನು ಸ್ವಚ್ಛವಾಗಿ ತೊಳೆದು ಇಡಬೇಕು. ಅಡುಗೆಮನೆಯನ್ನು ಆದಷ್ಟು ಶುಭ್ರವಾಗಿ ಇಟ್ಟುಕೊಳ್ಳಿ. ಏಕೆಂದರೆ ಅದು ಅನ್ನದ ರೂಪದಲ್ಲಿ ಅನ್ನಪೂರ್ಣೇಶ್ವರಿಯು ನೆಲೆಸಿರುವ ಜಾಗ.
ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ ತಾಯಿಯರಿಗೆ ಗೌರವವನ್ನು ಕೊಡಿ. ಮಕ್ಕಳಿಗೂ ಚಿಕ್ಕಂದಿನಿಂದಲೇ ಇದನ್ನು ಕಲಿಸಿ.