ಧನುರ್ಮಾಸದ ಈ ಒಂದು ದಿನ 1000 ವರ್ಷದ ಪೂಜಾ

ನಾವು ಈ ಲೇಖನದಲ್ಲಿ ಧನುರ್ಮಾಸದ ಈ ಒಂದು ದಿನ ಸಾವಿರ ವರ್ಷದ ಪೂಜಾ ಫಲ ಹೇಗೆ ದೊರೆಯುತ್ತದೆ ಎಂದು ನೋಡೋಣ . ಧನುರ್ಮಾಸದ ಪೂಜೆಯಿಂದ ಸಾವಿರ ವರ್ಷದ ಪೂಜಾ ಫಲ ಒಂದೇ ದಿನ ಲಭ್ಯ . ಪೂಜಾ ಮಹತ್ವ ಮತ್ತು ಅನುಸರಿಸಬೇಕಾದ ಕ್ರಮವೇನು…! ಎಂಬುದನ್ನು ತಿಳಿಯೋಣ . ಧನುರ್ಮಾಸದ ಪೂಜೆ ಬಹಳ ವಿಶೇಷ . ಅರುಣೋದಯಕ್ಕೂ ನಾಲ್ಕು ಘಳಿಗೆ ಮೊದಲೇ ಎದ್ದು , ಅರುಣೋದಯದಲ್ಲಿ ಪೂಜೆ ಆರಂಭಿಸಿ ಸೂರ್ಯೋದಯಕ್ಕೂ ಮೊದಲೇ ಪೂಜೆ ಮುಗಿಸಬೇಕು ಎನ್ನುತ್ತದೆ ಶಾಸ್ತ್ರ .

ಹೀಗೆ ಮಾಡುವುದರಿಂದ ಸಾವಿರ ವರ್ಷಗಳ ಪೂಜಾ ಫಲ ಒಂದೇ ದಿನದಲ್ಲಿ ಲಭ್ಯವಾಗುತ್ತದೆ ಎಂಬುದು ನಂಬಿಕೆ . ಧನುರ್ಮಾಸದ ಪೂಜೆಯ ವಿಶೇಷ ಮಹತ್ವ ಮತ್ತು ಕ್ರಮಗಳ ಕುರಿತು ಒಂದಿಷ್ಟು ವಿವರ ತಿಳಿಯೋಣ .
ಭಗವಂತನ ಅನುಗ್ರಹವನ್ನು ಪಡೆದು ಕೃತಾರ್ಥರು ಆಗಬೇಕು ಎಂದು ಪ್ರಯತ್ನಿಸುವ ಸಜ್ಜನರ ಮೇಲೆ ಭಗವಂತ ತೋರಿಸುವ ಅನುಗ್ರಹ ಅಪಾರವಾದುದು . ಧನುರ್ಮಾಸದ ಪೂಜೆ ಮಾಡುವುದರಿಂದ ಒಂದು ಸಾವಿರ ವರ್ಷ ಮಾಡುವ ಪೂಜೆ ಪುಣ್ಯದ ಫಲವನ್ನು ಒಂದು ದಿನದಲ್ಲಿ ಭಗವಂತ ಕೊಡುತ್ತಾನೆ .

ಅನೇಕ ರೀತಿಯ ಕಾರುಣ್ಯವನ್ನು ಭಗವಂತ ತೋರಿಸುತ್ತಿದ್ದು , ಅಂತಹ ಕಾರುಣ್ಯ ಗಳ ಪೈಕಿ ಒಂದು ಧನುರ್ಮಾಸದ ಪೂಜೆಗೆ ಭಗವಂತ ನೀಡಿರುವ ಮಹತ್ವವೇ ಇದು . ಧನುರ್ಮಾಸದ ಕಾಲದಲ್ಲಿ ಸೂರ್ಯೋದಯಕ್ಕಿಂತ ಮುಂಚೆ , ಅರುಣೋದಯ ಕಾಲದಲ್ಲಿ ದೇವರ ಪೂಜೆಯನ್ನು ಮಾಡಬೇಕು . ಆ ರೀತಿಯಾಗಿ ಪೂಜೆಯನ್ನು ಮಾಡುವುದರಿಂದ ಒಂದು ಸಾವಿರ ವರ್ಷ ಪೂಜೆಯನ್ನು ಮಾಡಿದರೆ ,

ಏನು ಫಲ ಸಿಗುವುದು ಆ ಫಲವನ್ನು ಒಂದೇ ದಿನದಲ್ಲಿ ಪಡೆಯಬಹುದು . ಮನುಷ್ಯನಾದವನು ನಿರಂತರ ಒಂದು ಸಾವಿರ ವರ್ಷ ಬದುಕುವುದು ಸಾಧ್ಯವೇ ಇಲ್ಲ . ಬದುಕಿದರೂ ನಿರಂತರ ಒಂದು ಸಾವಿರ ವರ್ಷ ಪೂಜೆ ಮಾಡುವುದು ಸಾಧ್ಯವೇ ಇಲ್ಲ. ಯಾವುದನ್ನು ನಮಗೆ ಪಡೆಯುವುದಕ್ಕೆ ಸಾಧ್ಯವಿಲ್ಲವೋ ಅಂತ ಪೂಜೆ ಫಲವನ್ನು ಭಗವಂತ ನಮಗೆ ಈ ಅವಧಿಯಲ್ಲಿ ಸಲ್ಲಿಸುವ ಪೂಜೆಯ ಮೂಲಕ ಅನುಗ್ರಹಿಸುತ್ತಾನೆ .
ಈ “ಪೂಜೆಯನ್ನು ಹೇಗೆ ಮಾಡಬೇಕು. ” ?

ಯಾವ ಕ್ರಮದಲ್ಲಿ ಮಾಡಬೇಕು . ಚೈತ್ರ , ವೈಶಾಖ , ಜೇಷ್ಠ , ಆಷಾಢ , ಶ್ರಾವಣ , ಮುಂತಾದವು ಚಾಂದ್ರಮಾನ ಮಾಸದ ಪರಿಗಣನೆ.ಅದೇ ರೀತಿ ಮೇಷ , ವೃಷಭ , ಮಿಥುನ , ಮುಂತಾದವು ಸೌರಮಾನ ಮಾಸದ ಪರಿಗಣನೆ . ಈ ಸೌರಮಾನದ ಪರಿಗಣನೆಯಲ್ಲಿ ಯಾವ ರಾಶಿಯಲ್ಲಿ ಸೂರ್ಯನಿರುತ್ತಾನೆಯೋ ಆ ರಾಶಿ ಹೆಸರು ಬರುತ್ತದೆ .ಅಂದರೆ ಸೂರ್ಯ ಮೇಷ ರಾಶಿಯಲ್ಲಿದ್ದರೆ ಅದು ಮೇಷ ಮಾಸ . ಸಿಂಹ ರಾಶಿಯಲ್ಲಿದ್ದರೆ ಅದು ಸಿಂಹ ಮಾಸ ಅದೇ ರೀತಿ ಈಗ ಸೂರ್ಯ ಧನು ರಾಶಿಯಲ್ಲಿರುವ ಕಾರಣ ಈಗ ಧನುರ್ಮಾಸ .

ಯಾವ ದಿನ ಸೂರ್ಯನು ಆ ರಾಶಿಯನ್ನು ಸೂರ್ಯೋದಯದ ಒಳಗೆ ಪ್ರವೇಶಿಸುತ್ತಾನೆ ಆ ದಿನವೇ ಧನು ಪೂಜೆ ಶುರು . ಸೂರ್ಯ ದೇವನು ಮಕರ ರಾಶಿಗೆ ಪ್ರವೇಶಿಸಿದ ಬಳಿಕ ಧನುರ್ಮಾಸದ ಪೂಜೆ ಸಮಾಪ್ತಿಯಾಗುವುದಿಲ್ಲ . ಯಾವ ದಿನ ಕೊನೆಯದಾಗಿ ಸೂರ್ಯೋದಯದ ಒಳಗೆ ಧನು ರಾಶಿಯಲ್ಲಿ ಸೂರ್ಯ ಇದ್ದಾನೋ ಆ ದಿನವೇ ಧನರ್ಮಾಸದ ಪೂಜೆ ಸಮಾಪ್ತಿ .

ಧನುರ್ಮಾಸದಲ್ಲಿ ಅರುಣೋದಯದ ಕಾಲದಲ್ಲಿಯೇ ಪೂಜೆ ಮಾಡಬೇಕು. ಸೂರ್ಯೋದಯಕ್ಕಿಂತ 4 ಘಳಿಗೆ ಮೊದಲು ಅರುಣೋದಯ ಇರುತ್ತದೆ . ಒಂದು ಘಳಿಗೆ ಅಂದರೆ 24 ನಿಮಿಷ . 4 ಘಳಿಗೆ ಅಂದರೆ 96 ನಿಮಿಷ . ಅರುಣೋದಯ ಶುರುವಾಗುತ್ತದೆ . ಅದು ಧನುರ್ಮಾಸದ ಪೂಜೆಗೆ ಪ್ರಶಸ್ತ ಕಾಲ . ದೇವತೆಗಳ ಪಾಲಿಗೆ ನಮ್ಮ ಅಂದರೆ ಮನುಷ್ಯರ 365 ದಿನಗಳು ಒಂದು ಹಗಲು ಮತ್ತು ಒಂದು ರಾತ್ರಿ . ನಮ್ಮಲ್ಲಿ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದಿದೆ ಎಲ್ಲ .

ಅದು ದಕ್ಷಿಣಾಯಣ ಅವರಿಗೆ ರಾತ್ರಿ , ಉತ್ತರಾಯಣ ಅವರಿಗೆ ಹಗಲು . ದಕ್ಷಿಣಾಯಣದ ಕಾಲದಲ್ಲಿ ಸೂರ್ಯ ಆರು ರಾಶಿಗಳಲ್ಲಿ ಇರುತ್ತಾನೆ. ಉತ್ತರಾಣದಲ್ಲೂ ಆರು ರಾಶಿಗಳಲ್ಲಿ ಇರುತ್ತಾನೆ. ಒಂದು ದಿವಸ ಎಂದರೆ 60 ಘಳಿಗೆ . 60 ಘಳಿಗೆಯನ್ನು ಎರಡು ಭಾಗ ಮಾಡಿದರೆ 30 – 30 ಘಳಿಗೆಗಳು ಬರುತ್ತವೆ. ಈ ಲೆಕ್ಕಾಚಾರ ಪ್ರಕಾರ ಒಂದೊಂದು ರಾಶಿಯಲ್ಲಿ ಸೂರ್ಯ 5 ಘಳಿಗೆ ಇರುತ್ತಾನೆ .

ಧನುರ್ಮಾಸದ 5 ಘಳಿಗೆ ಇದೆಯಲ್ಲ , ಅದು ದೇವತೆಗಳ ಪಾಲಿಗೆ ಸೂರ್ಯೋದಯಕ್ಕಿಂತ ಮುಂಚಿನ ಅವಧಿ ಎನ್ನುವ ಲೆಕ್ಕಾಚಾರದೊಳಗೆ ಅರುಣೋದಯ. ಈ ಅವಧಿಯಲ್ಲಿ ದೇವತೆಗಳು ಎದ್ದು ಸ್ನಾನ ಸಂಧ್ಯಾವಂದನೆಗಳನ್ನು ಮಾಡುತ್ತಾರೆ . ದೇವತೆಗಳು ಎಚ್ಚರಗೊಂಡು ಭಗವಂತನನ್ನು ಆರಾಧಿಸುತ್ತಾರೆ .
ಅರುಣೋದಯದ ಕಾಲ ಅದು ದೇವತೆಗಳ ಕಾಲ . ಬ್ರಾಹ್ಮಕಾಲ . ಅದೇ ಸಂದರ್ಭದಲ್ಲಿ ನಾವು ದೇವತೆಗಳ ಆರಾಧನೆಯನ್ನು ಮಾಡಿದಾಗ , ಭಗವಂತ ಸುಪ್ರೀತನಾಗುತ್ತಾನೆ .ಅದಕ್ಕಾಗಿ ಮುಖ್ಯ ಅರುಣೋದಯೇ ಪೂಜಾ ಮದ್ಯಮ ಲುಪ್ತ ತಾರಕಾ .

ಸುಮಾರು 6:30ಕ್ಕೆ ಸೂರ್ಯೋದಯ ಆಗುವುದಾದರೆ ಅದಕ್ಕೂ ಮೊದಲೇ ದೇವರ ಪೂಜೆ ಮಾಡಿ ಪೆಟ್ಟಿಗೆ ಕಟ್ಟಿಟ್ಟು ದೇವರಿಗೆ ನಮಸ್ಕಾರ ಮಾಡಿಬಿಡಬೇಕು. ಒಂದುವರೆ ಗಂಟೆ ಕಾಲ ಪೂಜೆ ಮಾಡುವುದಾದರೆ ಸೂರ್ಯೋದಯಕ್ಕೆ ಒಂದುವರೆ ಗಂಟೆ ಮೊದಲೇ ಪೂಜೆ ಶುರು ಮಾಡಬೇಕು . ಅದಕ್ಕಿಂತ ಮುಂಚೆಯೇ ನಮ್ಮ ಸಂಧ್ಯಾವಂದನೆ ಮತ್ತು ಪೂಜಾ ಸಿದ್ಧತೆ ಮಾಡಿ ಕೊಂಡರಬೇಕು. ಅದಕ್ಕಿಂತಮೊದಲೇ ಎದ್ದು ಶೌಚ, ಮುಖ ತೊಳೆಯುವುದು, ತಣ್ಣೀರಿನಲ್ಲಿ ಸ್ನಾನ , ಇತ್ಯಾದಿ ಮುಗಿಸಿ ಕೊಂಡಿರಬೇಕು.

ಆರುವರೆ ಸೂರ್ಯೋದಯ ಎಂದಾದರೆ , ಮೂರು ಅಥವಾ 3: 30ಕ್ಕೆಲ್ಲ ಎದ್ದು ಈ ಎಲ್ಲಾ ಕೆಲಸ ಮುಗಿಸಿರಬೇಕು .ಅರುಣೋದಯದಲ್ಲಿ ಪೂಜೆ ಮಾಡಿದರೆ ಅದು ಉತ್ತಮವಾದುದು. ಆಗ ಸಂಪೂರ್ಣ ಕತ್ತಲು ಇರುತ್ತದೆ. ಇನ್ನು ನಕ್ಷತ್ರಗಳು ಮರೆಯಾಗಿ ಇನ್ನೇನು ಸೂರ್ಯೋದಯ ಲಕ್ಷಣಗಳು ಗೋಚರಿಸುವಾಗ ಪೂಜೆ ಶುರು ಮಾಡಿದರೆ ಅದು ಮಧ್ಯಮ . ಅದೇ ರೀತಿ ಪೂಜೆ ಮಾಡುವಾಗ ,

ಸೂರ್ಯೋದಯ ಆಗಿದ್ದರೆ ಅದು ಅಧಮ ಪೂಜೆ .ಇನ್ನು ಮಧ್ಯಾಹ್ನ ಪೂಜೆ ಮಾಡಿದರೆ ನಿಷ್ಪಲವಾಗುತ್ತದೆ .ಸರಳವಾಗಿ ಹೇಳಬೇಕು ಎಂದರೆ , ದೇವರ ಪೂಜೆ ಯಾವಾಗ ಮಾಡಿದರು ಅದಕ್ಕೆ ಫಲ ಇದ್ದೇ ಇರುತ್ತದೆ .ಆದರೆ ಧನುರ್ಮಾಸದಲ್ಲಿ ಮಧ್ಯಾಹ್ನ ಪೂಜೆ ಮಾಡಿದರೆ, ಅರುಣೋದಯದಲ್ಲಿ ಮಾಡಿದಾಗ ಸಿಗುವ ಸಾವಿರ ವರ್ಷದ ಪೂಜೆಯ ಫಲ ಸಿಗುವುದಿಲ್ಲ ಎಂದು ಹೇಳಲಾಗಿದೆ .

ಅರುಣೋದಯದಲ್ಲಿ ಪೂಜೆ ಮಾಡುವುದು ಸಾಧ್ಯವಾಗಲಿಲ್ಲ ಎಂದು , ಪೂಜೆಯನ್ನು ಮಾಡುವುದನ್ನು ಬಿಟ್ಟರೆ , ಆಗ ಪೂಜೆ ಮಾಡದೇ ಇರುವ ದೋಷ ಉಂಟಾಗುತ್ತದೆ . ಪೂಜೆ ಮಾಡುವುದನ್ನು ಬಿಡಬಾರದು .
ಶ್ರೀಮದ್ ರಾಘವೇಂದ್ರ ವಿಜಯದಲ್ಲಿ ಹೇಳಿರುವ ಪ್ರಕಾರ , ಧನುರ್ಮಾಸದಲ್ಲಿ ದೇವರಿಗೆ ಮುದ್ಗಾನ್ನ ಅಂದರೆ , ಹುಗ್ಗಿ ನೈವೇದ್ಯ ವಿಶೇಷ ಅಕ್ಕಿ ಮತ್ತು ಅಂದರ ಎರಡು ಪಟ್ಟು ಹೆಸರುಬೇಳೆ , ಏಲಕ್ಕಿ, ಹಸಿ ಶುಂಠಿ, ಒಣ ಶುಂಠಿಯನ್ನು ಹಾಕಿ ಹುಗ್ಗಿಯನ್ನು ತಯಾರು ಮಾಡಬೇಕು. ಹುಗ್ಗಿಯ ಜೊತೆಗೆ ಬೆಲ್ಲದ ಗೊಜ್ಜು , ಮೊಸರು ಕೂಡ ಭಗವಂತನಿಗೆ ಸಮರ್ಪಿಸಬೇಕು .

ಯಾರು ಈ ಹುಗ್ಗಿಯನ್ನು ದೇವರಿಗೆ ಸಮರ್ಪಿಸುತ್ತಾರೋ , ಅಂತವರ ಶತ್ರು ನಾಶವಾಗುತ್ತದೆ . ನಮ್ಮ ಬದುಕಿನಲ್ಲಿರುವ ಶತ್ರುಗಳ ಮತ್ತು ಹಿತ ಶತ್ರುಗಳ ಕಾಟವನ್ನು ನಿವಾರಿಸುವ ಕೆಲಸ ಧನುರ್ಮಾಸದ ಪೂಜೆಯಿಂದ ಆಗುತ್ತದೆ. ನಾವು ನಮ್ಮ ಆಲಸ್ಯವೆಂಬ ಶತ್ರುವನ್ನು ಗೆದ್ದು , ದೇವರ ಪೂಜೆ ನೆರವೇರಿಸುವ ಕಾರಣ ಎಲ್ಲಾ ಶತ್ರು ಕಾಟವು ನಾಶವಾಗುತ್ತದೆ . ದೀರ್ಘಾಯುಷ್ಯವನ್ನು ಆರೋಗ್ಯವನ್ನು ಒದಗಿಸುತ್ತಾನೆ . ನಿಷ್ಕರ್ಮವಾಗಿ ಪೂಜೆ ಸಲ್ಲಿಸುವುದರಿಂದ , ಸಿಗುವ ಫಲ ಇದು.

ಸರಿಯಾದ ಸಾತ್ವಿಕ ಅಪೇಕ್ಷೆಯನ್ನು ಇಟ್ಟುಕೊಂಡು ಧನುರ್ಮಾಸದ ಪೂಜೆ ಮಾಡಿದವರಿಗೆ , ಭಗವಂತ ಅನುಗ್ರಹಿಸುತ್ತಾನೆ . ಆದರೆ ಈ ಎಲ್ಲಾ ಪೂಜೆಯು ಅರುಣೋದಯದಲ್ಲಿ ಆಗಬೇಕು . ನಮ್ಮ ಬದುಕಿನಲ್ಲಿ ಬರುವ ಅಷ್ಟೂ ಧನುರ್ಮಾಸದಲ್ಲಿ ಈ ಪೂಜೆ ನೆರವೇರಿಸಬೇಕು. ಹೀಗೆ ಮಾಡುವುದಿಂದ ಭಕ್ತಿ ಜ್ಞಾನ ಸಂಪತ್ತು ಹೆಚ್ಚಾಗುವುದು ಎಂಬುದು ದೊಡ್ಡವರ ನಂಬಿಕೆ

Leave a Comment