ಬಲಮುರಿ ಹಾಗೂ ಎಡಮುರಿ ಗಣಪತಿಯ ನಡುವೆ ಇರುವ ವ್ಯತ್ಯಾಸ ಮತ್ತು ವಿಶೇಷತೆ

ನಾವು ಈ ಲೇಖನದಲ್ಲಿ ಬಲಮುರಿ ಮತ್ತು ಎಡಮುರಿ ಗಣಪತಿಯ ನಡುವೆ ಇರುವ ವ್ಯತ್ಯಾಸ ಮತ್ತು ವಿಶೇಷತೆ ಏನು ಎಂಬುದರ ಬಗ್ಗೆ ತಿಳಿಯೋಣ. ಗಣಪತಿ ದೇವರು ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಮೊದಲ ಪೂಜೆಗೆ ಅರ್ಹರಾದಂತಹ ದೇವರು .ಯಾವುದೇ ಶುಭ ಕಾರ್ಯ ಮತ್ತು ಪೂಜೆ ಪ್ರಾರಂಭ ಮಾಡುವ ಮೊದಲು , ಗಣೇಶ ದೇವರನ್ನು ಪೂಜೆ ಮಾಡಲಾಗುತ್ತದೆ . ಗಣೇಶ ದೇವರು ವಿಘ್ನ ವಿನಾಶಕ ಆಗಿರುವುದರಿಂದ , ಗಣೇಶ ದೇವರನ್ನು ಪೂಜಿಸುವುದರಿಂದ , ಜೀವನದಲ್ಲಿ ಎದುರಾಗುವಂತಹ ಎಲ್ಲಾ ಬಿಕ್ಕಟ್ಟುಗಳನ್ನು ಸಹ ಗಣಪ ದೇವರು ನಿವಾರಿಸುತ್ತಾರೆ .

ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಸಹ ಗಣಪತಿ ದೇವರ ಮೂರ್ತಿಗಳು ಇರುತ್ತವೆ. ಸಾಮಾನ್ಯವಾಗಿ ಜನರು ಗಣೇಶ ದೇವರ ವಿಗ್ರಹದಲ್ಲಿ ಸೊಂಡಿಲು ಎಡಗಡೆ ಇದಿಯೋ, ಅಥವಾ ಬಲಗಡೆ ಇದೆಯೋ, ಎಂದು ಗಮನಿಸುವುದಿಲ್ಲ . ಗಮನಿಸಿದರೂ ವಿಶೇಷತೆ ಇಲ್ಲ ಎಂದು ಸುಮ್ಮನಾಗಿರುತ್ತಾರೆ . ಆದರೆ ಗಣಪತಿ ಪೂಜೆಯಲ್ಲಿ ಸೊಂಡಿಲಿಗೆ ಸಂಬಂಧ ಪಟ್ಟಂತೆ ನಿಯಮಗಳಿವೆ. ಗಣಪತಿಯ ಸೊಂಡಿಲು ಬಲಕ್ಕೆ ಇದ್ದರೆ ಏನು ಅರ್ಥ. ಅಥವಾ ಸೊಂಡಿಲು ಎಡಕ್ಕೆ ಇದ್ದರೆ ಏನು ಅರ್ಥ ಎಂಬುದರ ಬಗ್ಗೆ ತಿಳಿಯೋಣ .

ಗಣಪತಿಯನ್ನು ಸಾಮಾನ್ಯವಾಗಿ ಬಲಮುರಿ ಮತ್ತೆ ಎಡ ಮುರಿ ಗಣಪತಿ ಎಂದು ಕರೆಯುವುದುಂಟು . ಗಣಪತಿಯ ಸೊಂಡಿಲು ಎಡಕ್ಕೆ ತಿರುಗಿದ್ದರೆ ಎಡಮುರಿ ಗಣಪನೆಂದು , ಗಣಪತಿಯ ಸೊಂಡಿಲು ಬಲಕ್ಕೆ ತಿರುಗಿದ್ದರೆ , ಬಲಮುರಿ ಗಣಪನೆಂದು ಕರೆದು ಪೂಜಿಸಲಾಗುತ್ತದೆ .ಬಲಮುರಿ ಗಣಪನನ್ನು ಜಾಗೃತ ಗಣಪತಿ ಎಂದು ಉಲ್ಲೇಖಿಸಲಾಗುತ್ತದೆ . ಆದರೆ ಬಲಮುರಿ ಗಣೇಶ ದೇವರ ವಿಗ್ರಹಗಳು ಕಂಡು ಬರುವುದು ಬಹಳ ಅಪರೂಪ . ಸಾಮಾನ್ಯವಾಗಿ ಎಲ್ಲೆಡೆ ಎಡಮುರಿ ಗಣೇಶ ಮೂರ್ತಿಗಳನ್ನು ನಾವು ನೋಡಿರುತ್ತೇವೆ .

ಬಲಮುರಿ ಗಣೇಶನ ಮೂರ್ತಿಗಳು ನೂರಕ್ಕೆ 1 ಅಥವಾ 2 ನಮಗೆ ಕಂಡು ಬರುತ್ತದೆ .ಸಾಮಾನ್ಯವಾಗಿ ಬಲಮುರಿ ಗಣೇಶ ಮೂರ್ತಿಗಳನ್ನು ಮನೆಗಳಲ್ಲಿ ಇಟ್ಟು ಪೂಜೆ ಮಾಡುವುದಿಲ್ಲ . ಕೆಲವು ದೇವಸ್ಥಾನಗಳಲ್ಲಿ ಮಾತ್ರ ಬಲಮುರಿ ಗಣೇಶನ ಮೂರ್ತಿಗಳು ನಮಗೆ ಕಂಡು ಬರುತ್ತವೆ. ಮನೆಯಲ್ಲಿ ಪೂಜಿಸಲು ಎಡೆಮುರಿ ಗಣಪತಿ ಸೂಕ್ತ ಎಂದು ನಂಬಿಕೆ ಇದೆ. ಈ ಒಂದು ನಂಬಿಕೆಗೆ ಕಾರಣವೂ ಸಹ ಇದೆ . ಬಲಮುರಿ ಗಣಪತಿಯೆಂದರೆ ಸೊಂಡಿಲು ಬಲಕ್ಕೆ ತಿರುಗುವ ಗಣಪತಿ .

ಅಂದರೆ, ದಕ್ಷಿಣಾಭಿಮುಖಿ ಮೂರ್ತಿ . ಬಲ ಬದಿ ಎಂದರೆ ದಕ್ಷಿಣ ದಿಕ್ಕು . ಯಮ ಲೋಕದ ಕಡೆಗೆ ಕೊಂಡೊಯ್ಯುವಂತದ್ದು ಆಗಿದೆ . ಗಣಪತಿಯ ಬಲಭಾಗದ ಸೊಂಡಿಲು ಎಲ್ಲಾ ಅಲೌಕಿಕ ಸುಖಗಳಿಂದ ಮುಕ್ತಿ ಹಾಗೂ ಮೋಕ್ಷವನ್ನು ಬಿಂಬಿಸುತ್ತದೆ. ಕುಟುಂಬ ಹೊಂದಿರುವ ಜನರು ಕರ್ತವ್ಯಗಳನ್ನು ಹೊಂದಿರುವುದರಿಂದ , ಹಾಗೂ ಲೌಕಿಕ ಜೀವನದ ಸಂತೋಷಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲದ ಕಾರಣ ಬಲಮುರಿ ಗಣೇಶ ದೇವರ ವಿಗ್ರಹಗಳನ್ನು ಮನೆಯಲ್ಲಿ ಸಾಮಾನ್ಯವಾಗಿ ಪೂಜಿಸುವುದಿಲ್ಲ.

ಇನ್ನೊಂದು ವಿಶೇಷತೆ ಎಂದರೆ, ಬಲಬದಿಯಲ್ಲಿ ಸೂರ್ಯ ನಾಡಿ ಇರುತ್ತದೆ . ಸೂರ್ಯನು ಹೇಗೆ ಸೃಷ್ಟಿಸಬಲ್ಲ ನೋ , ಹಾಗೆಯೇ ನಾಶ ಮಾಡಬಲ್ಲ . ಹಾಗಾಗಿ ದೇಗುಲಗಳ ಹೊರತಾಗಿ ಬಲಮುರಿ ಗಣೇಶ ದೇವರ ಮೂರ್ತಿಯನ್ನು ಮನೆಗಳಲ್ಲಿ ಇಟ್ಟುಕೊಂಡು ಪೂಜಿಸುವುದು ತೀರಾ ಅಪರೂಪ . ಹಾಗೇನಾದರೂ ಬಲ ಮುರಿ ಗಣೇಶ ದೇವರ ಮೂರ್ತಿಯನ್ನು ಮನೆಗಳಲ್ಲಿ ಇಟ್ಟು ಪೂಜಿಸುತ್ತಿದ್ದರೆ , ಗಣೇಶ ದೇವರ ಪೂಜೆಯಲ್ಲಿ ಕಟ್ಟು ನಿಟ್ಟಿನ ವಿಧಾನಗಳನ್ನು ಪಾಲಿಸಬೇಕಾಗುತ್ತದೆ ಸರಿಯಾದ ಪೂಜಾ ವಿಧಿ ವಿಧಾನಗಳನ್ನು ಅನುಸರಿಸಿ ,

ಪೂಜಿಸಿದರೆ ಮಾತ್ರ ಬಲಮುರಿ ಗಣಪತಿಯು ಶೀಘ್ರ ಫಲವನ್ನು ನೀಡುತ್ತಾನೆ . ಬಲಮುರಿ ಗಣಪತಿಯು ಉಷ್ಣ ಕಾರಕನಾಗಿದ್ದು, ಪೂಜೆ ಅಥವಾ ಇನ್ನಿತರ ವಿಷಯಗಳಲ್ಲಿ ಲೋಪವಾದರೆ, ಮನೆಯಲ್ಲಿ ಕೆಡಕು ಆಗುವ ಸಂಭವ ಇರುತ್ತದೆ. ಬಲಕ್ಕೆ ಬಾಗಿದ ಸೊಂಡಿಲಿನ ಗಣಪತಿಯ ವಿಗ್ರಹವನ್ನು ಸಿದ್ದಿ ವಿನಾಯಕ ಎಂದು ಕರೆಯಲಾಗುತ್ತದೆ. ಸಿದ್ಧಿ ಗಣಪತಿಯ ಪತ್ನಿಯರಲ್ಲಿ ಒಬ್ಬರು. ಅವರು ಗಣಪತಿಯ ಬಲಭಾಗದಲ್ಲಿ ನೆಲೆಸಿರುತ್ತಾರೆ. ಮತ್ತೊಂದೆಡೆ ಎಡ ಮುರಿಯ ಗಣಪತಿಯ ವಿಗ್ರಹಗಳು ಅತ್ಯಂತ ಜನಪ್ರಿಯವಾಗಿದೆ.

ಹೆಚ್ಚಿನ ಜನರು ಎಡ ಮುರಿ ಗಣಪತಿ ದೇವರನ್ನೇ ತಮ್ಮ ಮನೆಯಲ್ಲಿ ಪ್ರತಿ ಸ್ಥಾಪಿಸಿ ದಿನ ನಿತ್ಯ ಪೂಜೆ ಮಾಡುತ್ತಾರೆ. ಎಡ ಮುರಿ ಎಂದರೆ, ವಾಮ ಮುಖಿ ಗಣಪತಿ . ವಾಮ ಎಂದರೆ ಉತ್ತರ ದಿಕ್ಕು . ಮತ್ತು ಉತ್ತರ ದಿಕ್ಕು ಆಧ್ಯಾತ್ಮಕ್ಕೆ ಪೂರಕವಾದಂತದ್ದು . ಹಾಗೂ ಆನಂದ ದಾಯಕವಾದದ್ದು . ಎಡಬದಿಗೆ ಚಂದ್ರನಾಡಿ ಇರುತ್ತದೆ . ಬಲಮುರಿ ಗಣಪತಿ ವಿಗ್ರಹವು ಸೂರ್ಯನ ಶಕ್ತಿಯಿಂದ ಪ್ರಭಾವಿತವಾಗಿದ್ದರೆ , ಎಡ ಮುರಿ ಗಣಪತಿ ವಿಗ್ರಹ ಚಂದ್ರನ ಶಕ್ತಿಯಿಂದ ಪ್ರಭಾವಿತವಾಗಿರುತ್ತದೆ .

ಇದು ಶೀತಲತೆಯನ್ನು ಪ್ರತಿಪಾದಿಸುತ್ತದೆ. ಎಡ ಮುರಿ ಗಣಪತಿಯು ಶಾಂತ ಮತ್ತು ಆನಂದತೆಯನ್ನು ಸೂಚಿಸುವುದರಿಂದ ಎಡ ಮುರಿ ಗಣಪತಿಯು ದಿನ ನಿತ್ಯ ಪೂಜೆಗೆ ಯೋಗ್ಯವಾದಂತಹ ಗಣಪತಿ. ಮನೆಯಲ್ಲಿ ಎಡ ಮುರಿ ಸೊಂಡಿಲಿನ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವುದರಿಂದ ಮನೆ ಮನಗಳಲ್ಲಿ ಸುಖ , ಶಾಂತಿ, ಸಮೃದ್ಧಿ ಮನೆ ಮಾಡುತ್ತದೆ. ಎಡ ಮುರಿ ಗಣೇಶ ದೇವರು ಮನೆಯನ್ನು ಶುದ್ಧೀಕರಿಸುತ್ತಾರೆ. ಹಾಗೂ ವಾಸ್ತು ದೋಷವನ್ನು ಗುಣಪಡಿಸಲು ಸಹ ಸಹಾಯ ಮಾಡುತ್ತಾರೆ. ಎಡ ಮುರಿ ಗಣೇಶ ದೇವರನ್ನು ಪೂಜಿಸುವವರು ನಿತ್ಯವೂ ಗರಿಕೆ ಹುಲ್ಲನ್ನು ಅರ್ಪಿಸಿ , ಕಡಲೆಕಾಳು ನೈವೇದ್ಯವನ್ನು ಮಾಡುವುದರಿಂದ, ಎಲ್ಲಾ ರೀತಿಯ ತಾಪತ್ರಯಗಳಿಂದ ಮತ್ತು ವಿಘ್ನಗಳಿಂದ ಬಿಡುಗಡೆ ಪಡೆಯಬಹುದು.

Leave a Comment