ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ನಡುವಿನ ವ್ಯತ್ಯಾಸ

ನಾವು ಈ ಲೇಖನದಲ್ಲಿ ರಾಮ ತುಳಸಿ ಮತ್ತು ಕೃಷ್ಣ ತುಳಸಿಗೆ ಏನು ವ್ಯತ್ಯಾಸ… ? ಮತ್ತು ಯಾವುದು ಶ್ರೇಷ್ಠ….? ಎಂಬುದರ ಬಗ್ಗೆ ತಿಳಿಯೋಣ . ತುಳಸಿ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದಂತಹ ಸಸ್ಯ . ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿಯೂ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿರುವ ಗಿಡವೇ ತುಳಸಿ ಗಿಡ . ತುಳಸಿ ಗಿಡದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯ ವಾಸ ಸ್ಥಾನವಿದೆ. ಹಾಗಾಗಿ ಯಾರ ಮನೆಯಲ್ಲಿ ತುಳಸಿ ಗಿಡ ಇದೆಯೋ , ಅವರ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ , ಮನೆ ಮಾಡಿರುತ್ತದೆ.

ತುಳಸಿಯ ಕಟ್ಟೆ ಇರುವ ಸ್ಥಳ ಗಂಗಾ ನದಿಯ ತಟದಷ್ಟೂ ಪವಿತ್ರವಾದದ್ದು ಎಂದು ಹಿರಿಯರು ಉಲ್ಲೇಖಿಸಿದ್ದಾರೆ. ತುಳಸಿ ಗಿಡವು ಹೆಚ್ಚಿನ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಆದ್ದರಿಂದ ಮನೆಯ ಸುತ್ತ ತುಳಸಿ ಗಿಡವಿದ್ದರೆ, ಶುದ್ಧ ಗಾಳಿ ನಮ್ಮ ಉಸಿರಾಟಕ್ಕೆ ಸಹಜವಾಗಿ ಲಭ್ಯವಾಗುತ್ತದೆ. ಮಹಾವಿಷ್ಣು ಮತ್ತು ಅವರ ಅವತಾರಗಳಾದ ಶ್ರೀರಾಮ ಚಂದ್ರರು ಮತ್ತು ಶ್ರೀಕೃಷ್ಣ ಪರಮಾತ್ಮರ ಪೂಜೆಯಲ್ಲಿ ತುಳಸಿ ಎಲೆಯನ್ನು ಕಡ್ಡಾಯವಾಗಿ ಅರ್ಪಿಸಲಾಗುತ್ತದೆ.

ಬೇರೆ ಗಿಡಗಳಂತೆ ತುಳಸಿ ಎಲೆಯಲ್ಲಿಯೂ ಸಹ ಅನೇಕ ಪ್ರಭೇದಗಳಿವೆ. ಆದರೆ ಎಲ್ಲಾ ಪ್ರಭೇದಗಳಲ್ಲಿಯೂ ಎರಡು ಪ್ರಭೇದಗಳು ಧಾರ್ಮಿಕವಾಗಿ ಮಹತ್ವವನ್ನು ಪಡೆದುಕೊಂಡಿವೆ. ಆ ಎರಡು ಪ್ರಭೇದಗಳೇ ರಾಮ ತುಳಸಿ ಮತ್ತು ಕೃಷ್ಣ ತುಳಸಿ . ರಾಮ ತುಳಸಿ ಹಾಗೂ ಕೃಷ್ಣ ತುಳಸಿಯ ಮಧ್ಯೆ ಇರುವ ವ್ಯತ್ಯಾಸಗಳ ಬಗ್ಗೆ ತಿಳಿಯೋಣ . ಮತ್ತು ಯಾವ ತುಳಸಿ ಶ್ರೇಷ್ಠ ಎಂಬುದರ ಬಗ್ಗೆ ತಿಳಿಯೋಣ .

ಮೊದಲಿಗೆ ರಾಮ ತುಳಸಿ :- ರಾಮ ತುಳಸಿಯ ಎಲೆಗಳು ಮತ್ತು ಅದರ ದಂಟು ಹಸಿರು ಬಣ್ಣದಲ್ಲಿ ಇರುತ್ತದೆ . ಹಾಗೂ ಇದರ ಎಲೆಗಳು ಬಹಳ ಸಿಹಿಯಾಗಿ ಇರುತ್ತದೆ. ರಾಮ ತುಳಸಿ ಪ್ರತೀ ಮನೆಯಲ್ಲೂ ಸರ್ವೇ ಸಾಮಾನ್ಯವಾಗಿ ಇರುತ್ತವೆ. ರಾಮ ತುಳಸಿಯನ್ನು ಸ್ತ್ರೀ ತುಳಸಿ ಮತ್ತು ಉಜ್ವಲ ತುಳಸಿ ಎಂದು ಸಹ ಕರೆಯಲಾಗುತ್ತದೆ . ಈ ತುಳಸಿ ಪ್ರಭು ಶ್ರೀರಾಮಚಂದ್ರನಿಗೆ ಬಹಳ ಇಷ್ಟವಾದುದ್ದು . ರಾಮ ತುಳಸಿಗೆ ಧಾರ್ಮಿಕ ಗ್ರಂಥಗಳಲ್ಲಿ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ರಾಮ ತುಳಸಿಯ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸುಖ , ಶಾಂತಿ ಹಾಗೂ ಸಂಪತ್ತು ಹೆಚ್ಚಾಗುತ್ತದೆ. ಹಾಗೂ ರಾಮ ತುಳಸಿ ಮನೆಗೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ತುಳಸಿಯ ಎರಡನೇ ಪ್ರಭೇದವೇ ಶ್ಯಾಮ ತುಳಸಿ ಅಥವಾ ಕೃಷ್ಣ ತುಳಸಿ . ಈ ತುಳಸಿಯ ಎಲೆಗಳು ಹಾಗೂ ದಂಟು ಕಡು ನೆರಳೇ ಬಣ್ಣದಲ್ಲಿ ಇರುತ್ತದೆ . ಈ ತುಳಸಿ ಶ್ರೀ ಕೃಷ್ಣ ಪರಮಾತ್ಮರಿಗೆ ಬಹಳ ಪ್ರಿಯವಾದದ್ದು . ಶ್ರೀ ಕೃಷ್ಣ ಪರಮಾತ್ಮರ ಮತ್ತೊಂದು ಹೆಸರು ಶ್ಯಾಮ . ಹಾಗಾಗಿ ಈ ತುಳಸಿಗೆ ಶ್ಯಾಮ ತುಳಸಿ ಅಥವಾ ಕೃಷ್ಣ ತುಳಸಿ ಎಂದು ಕರೆಯಲಾಗುತ್ತದೆ. ಕೃಷ್ಣ ತುಳಸಿ ಹಾಗೂ ರಾಮ ತುಳಸಿಗಳು ಬೇರೆ ಬೇರೆ ಗುಣಗಳನ್ನು ಹೊಂದಿದೆ. ರಾಮ ತುಳಸಿಗೆ ಹೋಲಿಸಿದರೆ , ಶ್ಯಾಮ ತುಳಸಿ ರುಚಿಯಲ್ಲಿ ಕಡಿಮೆ ಸಿಹಿಯಾಗಿ ಇರುತ್ತದೆ.

ರಾಮ ತುಳಸಿ ಗಿಡದ ಎಲೆಗಳ ಪರಿಮಳವು ಕೃಷ್ಣ ತುಳಸಿ ಗಿಡಕ್ಕೆ ಹೋಲಿಸಿದಾಗ ಸ್ವಲ್ಪ ಕಡಿಮೆ ಇರುತ್ತದೆ. ಕೃಷ್ಣ ತುಳಸಿಯ ಎಲೆಯನ್ನು ತಿಂದಾಗ ನಾಲಿಗೆಗೆ ಸ್ವಲ್ಪ ಖಾರ ಆದಂತೆ ಆಗುತ್ತದೆ. ಆದರೆ ರಾಮ ತುಳಸಿ ಗಿಡದ ಎಲೆಯಲ್ಲಿ ಅಷ್ಟೊಂದು ಖಾರ ಇರುವುದಿಲ್ಲ . ಕೃಷ್ಣ ತುಳಸಿಯ ಗಿಡದ ಎಲೆಗಿಂತ ರಾಮ ತುಳಸಿಯ ಗಿಡದ ಎಲೆಗಳು ಬಹಳ ತಂಪನ್ನು ಹೊಂದಿರುತ್ತದೆ.

ಬೇಸಿಗೆ ಕಾಲದಲ್ಲಿ ರಾಮ ತುಳಸಿ ಗಿಡದ ಎಲೆಯನ್ನು ಪಾನಕ ಮಾಡಲು ಉಪಯೋಗಿಸಲಾಗುತ್ತದೆ. ಕೃಷ್ಣ ತುಳಸಿ ಗಿಡ ಸ್ವಲ್ಪ ಉಷ್ಣ ಗುಣವನ್ನು ಹೊಂದಿರುತ್ತದೆ. ಕೃಷ್ಣ ತುಳಸಿ ಗಿಡವನ್ನು ನಾವು ಮಳೆಗಾಲದಲ್ಲಿ ಜ್ವರ , ಶೀತ , ಕಫ ಆದಾಗ ಔಷಧವಾಗಿ ಬಳಸಬಹುದು . ಶ್ಯಾಮ ತುಳಸಿಯನ್ನು ಸಹ ಮತಯಲ್ಲಿ ನೆಟ್ಟು ಪೂಜಿಸಬಹುದು. ವಿಶೇಷವಾಗಿ ಶ್ರೀಕೃಷ್ಣನ ಪೂಜೆಯಲ್ಲಿ ಶ್ಯಾಮ ತುಳಸಿಯನ್ನು ಬಳಸುತ್ತಾರೆ. ಆದರೂ ಕೃಷ್ಣ ತುಳಸಿಯನ್ನು ಪೂಜೆಗಿಂತಲೂ ಔಷಧಿಯಾಗಿ ಬಳಸಲಾಗುತ್ತದೆ . ಕೃಷ್ಣ ತುಳಸಿ ಆಯುರ್ವೇದದಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದಿದೆ .

ಏಕೆಂದರೆ ಇದರ ಎಲೆಗಳು, ಬೀಜಗಳು , ಬೇರುಗಳು , ಎಲ್ಲವನ್ನು ಔಷಧವಾಗಿ ಬಳಸಲಾಗುತ್ತದೆ . ಮನೆಯಂಗಳದಲ್ಲಿ ರಾಮ ಮತ್ತು ಶ್ಯಾಮ ಈ ಎರಡು ತುಳಸಿಯ ಪ್ರಭೇದಗಳಲ್ಲಿ ಯಾವುದೇ ತುಳಸಿಯನ್ನು ಸಹ ನೆಡಬಹುದಾಗಿದೆ. ಆದರೆ ಪೂಜೆಯ ದೃಷ್ಟಿಯಿಂದ ರಾಮ ತುಳಸಿ ಗಿಡವನ್ನು ಮನೆಯಂಗಳದಲ್ಲಿ ನೆಡುವುದು ಅತ್ಯಂತ ಶುಭಕರವಾಗಿ ಇದೆ. ಅಂದರೆ ರಾಮ

ಹಾಗೂ ಶ್ಯಾಮ ತುಳಸಿಯಲ್ಲಿ ರಾಮ ತುಳಸಿ ಪೂಜೆಗೆ ಉತ್ತಮವಾದ ತುಳಸಿ ಎನಿಸಿಕೊಂಡರೆ , ಶ್ಯಾಮ ತುಳಸಿಯು ಔಷಧಿಯ ಗುಣಗಳಲ್ಲಿ ಉತ್ತಮವೆನಿಸಿಕೊಳ್ಳುತ್ತದೆ. ಮನೆಯಂಗಳದಲ್ಲಿ ಯಾವುದಾದರೂ ತುಳಸಿ ಗಿಡವನ್ನು ನೆಟ್ಟು ಪೂಜೆ ಮಾಡಬೇಕಾದರೆ , ರಾಮ ತುಳಸಿಯನ್ನು ನೆಟ್ಟು ಪೂಜಿಸಬಹುದು. ಕೆಲವರು ರಾಮ ಮತ್ತು ಕೃಷ್ಣ ತುಳಸಿಯನ್ನು ಒಟ್ಟಾಗಿ ಬೆಳೆಸಿರುತ್ತಾರೆ. ಹೀಗೆ ಮಾಡುವುದು ಸಹ ಮಂಗಳಕರ ಎಂದು
ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ.

Leave a Comment