ವೃದ್ಧಾಪ್ಯಕ್ಕೆ ಕಾರಣ. ಈ ಏಳು ಕಾರಣಗಳಿಂದ ವೃದ್ಧಾಪ್ಯ ಬೇಗ ಬರುತ್ತದೆ. ಇಂದು ಬಹಳಷ್ಟು ಜನರು ಸಣ್ಣ ವಯಸ್ಸಿನಲ್ಲಿಯೇ ಮುದುಕರಂತೆ ಕಾಣುತ್ತಾರೆ. ದೇಹದಲ್ಲಿ ಶಕ್ತಿಕುಂದುವದು, ಕೂದಲು ಬೆಳ್ಳಗಾಗುವುದು, ಹಲ್ಲುಗಳು ಹುಳುಕಾಗುವುದು ಇಲ್ಲವೇ ಬಿದ್ದು ಹೋಗುವುದು, ಮುಖ ಬಿಳುಚಿಕೊಳ್ಳುವುದು, ಕೆನ್ನೆಗಳು ಚಪ್ಪಗಾಗುವುದು, ಊಟ ಸುಲಭವಾಗಿ ಜೀರ್ಣವಾಗದಿರುವುದು, ಕಣ್ಣುಗಳು ಮಂಜಾಗುವುದು ಇತ್ಯಾದಿ.
ಬಹಳಷ್ಟು ನೀರು ಕುಡಿಯುವುದು: ನೀರನ್ನು ಹೆಚ್ಚಾಗಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತುಂಬಾ ಜನ ತಿಳಿದಿದ್ದಾರೆ. ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವ ಮಾತನ್ನು ನಾವು ನೆನಪಿನಲ್ಲಿಡಬೇಕು. ಅನಾವಶ್ಯಕವಾಗಿ ನೀರಡಿಕೆ ಇಲ್ಲದೆ ನಾವು ಹೆಚ್ಚು ಹೆಚ್ಚು ನೀರು ಕುಡಿಯುತ್ತಾ ಹೋದರೆ ಮೂತ್ರಪಿಂಡಗಳು ಬಹಳ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನಾವು ಅತಿಯಾಗಿ ನೀರು ಕುಡಿಯುವುದರಿಂದ ದೇಹದಲ್ಲಿನ ಲವಣಾಂಶವು ಏರುಪೇರಾಗಿ ತಲೆನೋವು, ವಾಂತಿ, ಸ್ನಾಯುಗಳಲ್ಲಿ ದುರ್ಬಲತೆ ಉಂಟಾಗುವ ಸಾಧ್ಯತೆಗಳಿವೆ.
ಆಯುರ್ವೇದದ ಪ್ರಕಾರವೂ ಅತಿ ಹೆಚ್ಚು ನೀರು ಕುಡಿಯುವುದರಿಂದ ವ್ಯಕ್ತಿಯು ಬೇಗನೆ ವೃದ್ಧಾಪ್ಯಕ್ಕೆ ಒಳಗಾಗುತ್ತಾನೆ.
ಹಗಲಿನಲ್ಲಿ ಮಲಗುವುದು ಮತ್ತು ರಾತ್ರಿಯಲ್ಲಿ ಏಳುವುದು: ಪ್ರಕೃತಿಯು ನಮ್ಮ ದೇಹದಲ್ಲಿ ಜೈವಿಕ ಗಡಿಯಾರವನ್ನು ಅಳವಡಿಸಿದೆ. ಹಿಂದಿನ ಕಾಲದಲ್ಲಿ ಮನುಷ್ಯರು ಈ ಜೈವಿಕ ಗಡಿಯಾರದ ಪ್ರಕಾರ ಮಲಗುತ್ತಿದ್ದರು ಮತ್ತು ಬೆಳಿಗ್ಗೆ ಬೇಗನೆ ಏಳುತ್ತಿದ್ದರು. ಆದರೆ ಈಗಿನವರ ದಿನಚರಿ ಹಿಂದಿನಂತೆ ಇಲ್ಲ. ಕೆಲವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ದಿನವಿಡೀ ಮಲಗಿರುತ್ತಾರೆ. ತಡರಾತ್ರಿಯವರೆಗೆ ಟಿವಿ ನೋಡುವುದು, ಮೋಜುಮಸ್ತಿಗಳಲ್ಲಿ, ದುರಭ್ಯಾಸಗಳಲ್ಲಿ ಮುಳುಗಿರುವುದು. ಇದಲ್ಲದೆ ಹಗಲು ರಾತ್ರಿ ಮಲಗುವ ಎಷ್ಟೋ ಜನರಿದ್ದಾರೆ. ಈ ಎಲ್ಲಾ ಅಭ್ಯಾಸಗಳು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಸರಿಯಾದ ನಿದ್ದೆ, ವಿಶ್ರಾಂತಿಯು ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ನಿದ್ರೆ ಕೊರತೆಯಿಂದ ಕಣ್ಣಿನ ಸುತ್ತ ಕಪ್ಪು ವರ್ತುಲಗಳಿಗೆ ಕಾರಣವಾಗುತ್ತದೆ. ಮೆದುಳು ದುರ್ಬಲವಾಗುತ್ತದೆ ಮತ್ತು ಜೀರ್ಣಶಕ್ತಿ ಕಡಿಮೆಯಾಗಿ ಬೊಜ್ಜು ಬರಲು ಕಾರಣವಾಗುತ್ತದೆ.
ಮಲ ಮತ್ತು ಮೂತ್ರ ಬಂದಾಗ ಮಾಡದಿರುವುದು: ಕೆಲವರು ಅನಿವಾರ್ಯವಾಗಿ ಕೆಲಸದ ಜಾಗದಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದರಿಂದ ಅಥವಾ ಇನ್ನಾವುದೋ ಕಾರಣದಿಂದ ಮಲಮೂತ್ರಗಳನ್ನು ವಿಸರ್ಜಿಸಲು ಆಗುವುದಿಲ್ಲ. ಮಲ ಮತ್ತು ಮೂತ್ರ ಬಂದಾಗ ಅದನ್ನು ಬಹಳ ಹೊತ್ತಿನವರೆಗೆ ಹಿಡಿದಿಟ್ಟುಕೊಳ್ಳಬಾರದು. ಹಾಗೆ ಮಾಡುವುದರಿಂದ ಮೂತ್ರಪಿಂಡಗಳು ಮತ್ತು ಕರುಳಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಶರೀರದಲ್ಲಿನ ಕಲ್ಮಶಗಳು ಬಹಳ ಹೊತ್ತಿನವರೆಗೆ ಉಳಿದರೆ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಮಾನಸಿಕ ಖಿನ್ನತೆ: ಮಾನಸಿಕ ಖಿನ್ನತೆಯು ಮನುಷ್ಯನನ್ನು ದೈಹಿಕವಾಗಿಯೂ ದುರ್ಬಲಗೊಳಿಸುತ್ತದೆ. ಮಾನಸಿಕ ಖಿನ್ನತೆಗೆ ಒಳಗಾದ ಮನುಷ್ಯ ಚಟುವಟಿಕೆಯಿಂದ ಕೆಲಸ ಮಾಡಲು ಆಗುವುದಿಲ್ಲ. ದೀರ್ಘಕಾಲದವರೆಗೆ ಮನುಷ್ಯನು ಮಾನಸಿಕ ಖಿನ್ನತೆಗೆ ಒಳಗಾದರೆ ದೇಹದಲ್ಲಿನ ಜೀವಕೋಶಗಳ ವಯಸ್ಸಾಗುವ ಪ್ರಕ್ರಿಯೆಯು ತೀವ್ರಗೊಳ್ಳುತ್ತದೆ. ಇದರಿಂದಾಗಿ ಖಿನ್ನತೆಗೆ ಒಳಗಾದವರು ಉಳಿದವರಿಗಿಂತ ಬೇಗನೆ ವಯಸ್ಸಾದಂತೆ ಆಗುತ್ತಾರೆ.
ಅತಿಯಾಗಿ ಉಪ್ಪನ್ನು ತಿನ್ನುವುದು: ಕೆಲವರು ಊಟದಲ್ಲಿ ಹೆಚ್ಚು ಉಪ್ಪನ್ನು ತಿನ್ನುತ್ತಾರೆ. ದಿನನಿತ್ಯ ಉಪ್ಪಿನಕಾಯಿ ಸೇವಿಸುತ್ತಾರೆ. ದೇಹದಲ್ಲಿ ಅತಿಯಾದ ಸೋಡಿಯಂ ಲವಣಾಂಶದಿಂದ ಜೀವಕೋಶಗಳ ಕೊಳೆಯುವಿಕೆ ಪ್ರಾರಂಭವಾಗುತ್ತದೆ. ಇವರು ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ಸಹ ಗುರಿಯಾಗಬಹುದು.
ದುರಭ್ಯಾಸಗಳು: ವಿವಿಧ ರೀತಿಯಲ್ಲಿ ತಂಬಾಕಿನ ಸೇವನೆ, ಧೂಮಪಾನ, ಮದ್ಯಪಾನ ಇತ್ಯಾದಿ ದುರಭ್ಯಾಸಗಳಿಂದಾಗಿ ಆರೋಗ್ಯವು ಕೆಡುತ್ತದೆ. ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಏರುಪೇರಾಗಿ ಹೃದಯ ಮತ್ತು ಮೆದುಳು ದುರ್ಬಲವಾಗುತ್ತದೆ. ಲಿವರ್ ನ ಆರೋಗ್ಯ ಕೆಡುತ್ತದೆ. ಸದಾ ತಂಬಾಕು ತೆಗೆಯುವ ವ್ಯಕ್ತಿಯ ಹಲ್ಲುಗಳು, ನಾಲಿಗೆ ಮತ್ತು ಬಾಯಿಯ ಒಳಗೆ ಮತ್ತು ಹೊರಗಿನ ಚರ್ಮದ ಜೀವಕೋಶಗಳು ಹಾನಿಗೊಳಗಾಗುತ್ತದೆ. ವ್ಯಕ್ತಿ ವಯಸ್ಸಾದಂತೆ ಕಾಣುತ್ತಾನೆ.
ಹೆಚ್ಚು ಚಟುವಟಿಕೆ ಇಲ್ಲದಿರುವುದು: ಇಂದು ಬಹುತೇಕ ಜನರು ಯಾವುದೇ ಚಟುವಟಿಕೆಗಳಲ್ಲದೆ 8 ಗಂಟೆಗಳ ಕಾಲ ಕಚೇರಿಗಳಲ್ಲಿ ಕುಳಿತುಕೊಂಡಿರುತ್ತಾರೆ. ಸ್ವಂತ ಉದ್ಯೋಗ ಮಾಡುವ ಕೆಲವರು ತಮ್ಮ ಅಂಗಡಿಗಳಲ್ಲಿ ಸುಮಾರು ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ಕುಳಿತುಕೊಳ್ಳುವ ಅನಿವಾರ್ಯತೆಯನ್ನು ಹೊಂದಿದ್ದಾರೆ. ದೀರ್ಘಕಾಲದವರೆಗಿನ ಈ ಅಭ್ಯಾಸವು ಬೊಜ್ಜು, ಸಕ್ಕರೆ ಕಾಯಿಲೆ, ಮೂತ್ರಪಿಂಡ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ.