ಯಾವ ದೇವರಿಗೆ ಯಾವ ಹೂವುಗಳು ಅರ್ಪಿಸಬೇಕು ತಿಳಿಯೋಣ ದೇವರಪೂಜೆಗೆ ಹೂವುಗಳು ಬೇಕೇ ಬೇಕು ಆಯಾ ದೇವರಿಗೆ ಪ್ರಿಯವಾದ ಹೂವುಗಳನ್ನು ಅರ್ಪಿಸಿದರೆ ದೇವರ ಆಶೀರ್ವಾದ ಲಭಿಸುವುದು ಮತ್ತು ಅಂದುಕೊಂಡಿರುವ ಕೋರಿಕೆಗಳು ಈಡೇರುತ್ತವೆ ಎನ್ನುವ ನಂಬಿಕೆ.
ಬಿಳಿ ಎಕ್ಕದ ಹೂವು ಪ್ರತಿ ಮಂಗಳವಾರ ಗಣೇಶನಿಗೆ ಪ್ರಿಯವಾದ ಬಿಳಿ ಎಕ್ಕದ ಹೂವನ್ನು ಗರಿಕೆಯೊಂದಿಗೆ ಸೇರಿಸಿ ಅರ್ಪಿಸಿದರೆ ಸಂಪೂರ್ಣವಾಗಿ ಆಶೀರ್ವಾದ ಸಿಗುವುದು ಮತ್ತು ಕೋರಿಕೆಗಳು ಈಡೇರುತ್ತವೆ. ಶಿವನಿಗೆ ಮತ್ತು ಆಂಜನೀಯ ಸ್ವಾಮಿಗೆ ಕೂಡಾ ಬಿಳಿ ಎಕ್ಕದ ಹೂವನ್ನು ಅರ್ಪಿಸುವರು.
ಉಮ್ಮತಿ ಹೂವು ಮತ್ತು ಉಮ್ಮತಿ ಕಾಯಿ ಇದು ಶಿವನಿಗೆ ಪ್ರಿಯವಾದ ಹೂವು ಅರ್ಪಿಸುವುದರಿಂದ ದೃಷ್ಟಿ ದೋಷ ಪರಿಹಾರ, ಆರೋಗ್ಯ, ವೃದ್ಧಿ, ಆರ್ಥಿಕ ಸಮಸ್ಯೆ ನಿವಾರಣೆಯಾಗುವುದು. ಉಮ್ಮತಿ ಕಾಯಿದೀಪ ಕಾರ್ತೀಕ ಮಾಸದಲ್ಲಿ ಶಿವನಿಗೆ ಹಚ್ಚುವುದು ತುಂಬಾ ಶ್ರೇಷ್ಠ. ಎಂತಹ ದೋಷಗಳಿದ್ದರೂ ಪರಿಹಾರವಾಗುವುದು. ಶಿವನಿಗೆ ಎಲ್ಲಾ ರೀತಿಯ ಬಿಳಿ ಹೂವುಗಳು ಪ್ರಿಯವಾದದ್ದು. ತುಂಬೆ ಹೂವು ಮತ್ತು ಬಿಲ್ವಪತ್ರೆಯನ್ನು ಕೂಡ ಅರ್ಪಿಸುವರು ಹೀಗೆ ಅರ್ಪಿಸುವುದರಿಂದ ಮನಸ್ಸಿನ ಕೋರಿಕೆಗಳು ಬಲು ಬೇಗ ಸಿದ್ದಿಸುವವು.
ನಾಗಲಿಂಗ ಪುಷ್ಪ ಅಥವಾ ನಾಗಸಂಪಿಗೆ ಇದನ್ನು ಶಿವನಿಗೆ ಮಾತ್ರ ಅರ್ಪಿಸುವರು ನಾಗಲಿಂಗ ಪುಷ್ಪದಲ್ಲಿ ಅದರ ಮೇಲೆ ಸರ್ಪದ ರೀತಿ ಇರುವುದು ಮಧ್ಯದಲ್ಲಿ ಲಿಂಗದ ರೂಪದಲ್ಲಿ ಇರುವುದು ತುಂಬಾ ವಿಶೇಷ ಇದರ ಪರಿಮಳವೂ ಶಿವನಿಗೆ ಪ್ರಿಯವಾದದ್ದು.
ಪಲಾಶ ಪುಷ್ಪ ಅಥವಾ ಮುತ್ತುಗದ ಹೂವು ಈ ಹೂವನ್ನು ಪ್ರತಿ ಬುಧವಾರ ಸರಸ್ವತಿ ದೇವಿಗೆ ಅರ್ಪಿಸುವುದರಿಂದ ಜ್ಞಾನ, ಒಳ್ಳೆಯ ವಿದ್ಯಾಬುದ್ದೀ ಪ್ರಾಪ್ತಿಯಾಗುವುದು, ಜ್ಞಾನದ ಸಂಕೇತವಾಗಿದೆ. ದೇವಿ ಸಂಪನ್ನಳಾಗುತ್ತಾಳೆ. ಮುತ್ತುಗದ ಎಲೆಯಲ್ಲಿ ಶಿವನಿಗೆ ಮತ್ತು ಲಕ್ಷ್ಮಿದೇವಿಗೆ ನೈವೇದ್ಯ ಅರ್ಪಿಸುವುದರಿಂದ ಚಂದ್ರದೋಷ ನಿವಾರಣೆಯಾಗುವುದು ಮತ್ತು ಲಕ್ಷ್ಮಿ ಕೃಪಾಕಟಾಕ್ಷ ಲಭಿಸುವುದು.
ಕೆಂಪು ದಾಸವಾಳ ಹೂವು ಅಥವಾ ಮಂದಾರ ಪುಷ್ಪ ಲಕ್ಷ್ಮೀದೇವಿಗೆ ಪ್ರತಿದಿನ ಅರ್ಪಿಸುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುವುದು. ಪ್ರತಿ ಮಂಗಳವಾರ ದುರ್ಗಾದೇವಿಗೆ 108 ಕೆಂಪು ದಾಸವಾಳದ ಹಾರವನ್ನು ಮಾಡಿ ಅರ್ಪಿಸುವುದರಿಂದ ಕೆಟ್ಟ ಸಮಯ ದೂರವಾಗುವುದು. ದುರ್ಗಾದೇವಿ, ಕಾಳಿಕಾದೇವಿ, ಚಾಮುಂಡೇಶ್ವರಿ ಪಾರ್ವತಿ ಗೌರಿಗೂ ಕೂಡ ಕೆಂಪು ದಾಸವಾಳದ ಹೂವನ್ನು ಅರ್ಪಿಸುವರು. ಮಲ್ಲಿಗೆ ಹೂವು ಹನುಮಂತ ಆಂಜನೇಯನಿಗೆ ತುಂಬಾ ಇಷ್ಟ ಇದನ್ನು ಅರ್ಪಿಸಿದರೆ ಶುಭವಾಗುವುದು.
ಪಾರಿಜಾತ ಹೂವು, ವಿಷ್ಣುವಿಗೆ ಮತ್ತು ಸೂರ್ಯನಾರಾಯಣನಿಗೆ ಈ ಹೂವು ಸಮರ್ಪಣೆ ಮಾಡಿದರೆ ಎಂತಹದೇ ಆರೋಗ್ಯ ಸಮಸ್ಯೆ ಇದ್ದರೂ ನಿವಾರಣೆಯಾಗುವುದು ಹಾಗೂ ಚರ್ಮ ರೋಗ ಸಮಸ್ಯೆ ಇದ್ದರೂ ಪರಿಹಾರವಾಗುವುದು ಈ ಪಾರಿಜಾತ ಪುಷ್ಪವನ್ನು ವಿಷ್ಣು ಸಾಗರಮಂಥನದ ಸಮಯದಲ್ಲಿ ಸ್ವರ್ಗಕ್ಕೆ ತಂದನು.
ತಾವರೆ ಹೂವು ಲಕ್ಷ್ಮಿಗೆ ಪ್ರಿಯವಾದ ಹೂವೂ ಈ ಹೂವನ್ನು ಅರ್ಪಿಸುವುದರಿಂದ ಆ ಮನೆಯಲ್ಲಿ ಲಕ್ಷ್ಮಿ ಕಟಾಕ್ಷದಿಂದ ಸಂತೋಷ ಸಂಮೃದ್ಧಿ ಹೆಚ್ಚಾಗುವುದು. ಇದರಲ್ಲಿ ಬಿಳಿ ತಾವರೆ ತುಂಬಾ ಶ್ರೇಷ್ಠ. ಶ್ರಾವಣ ಮಾಸದಲ್ಲಿ ಸತ್ಯನಾರಾಯಣ ಪೂಜೆಗೂ ಅರ್ಪಿಸುವರು.
ತುಳಸಿ ವಿಷ್ಣುದೇವರ ಪೂಜೆಗೆ ತುಳಸಿಯನ್ನು ಅರ್ಪಿಸಬೇಕು. ವಿಷ್ಣುವಿಗೆ ನೈವೇದ್ಯದಲ್ಲಿ ಒಂದು ತುಳಸಿ ದಳ ಹಾಕಿದರೆ ಪೂಜೆ ಸಂಪನ್ನವಾಗುವುದು. ಶ್ರಾವಣ ಶನಿವಾರ ಕಾರ್ತಿಕ ಮಾಸ ಶನಿವಾರ ತುಳಸಿಯನ್ನು ಅರ್ಪಿಸಿದರೆ ಉತ್ತರೋತ್ತರ ಅಭಿವೃದ್ಧಿಯಾಗುವುದು.
ನೀಲಿ ಬಣ್ಣದ ಹೂವು ಶನಿಗೆ ಅರ್ಪಿಸುವರು. ಎಲ್ಲಾ ಕೆಂಪು ಹೂವುಗಳು, ತಾವರೆ, ಮೋಗ್ರಾ ಹೂವು, ಬೇಲಾ ಹೂವುಗಳನ್ನು ದುರ್ಗಾದೇವಿಗೆ ಅರ್ಪಿಸುವರು ತುಳಸಿ ಎಲೆ, ನೀಲಿ ತಾವರೆ, ಪಾರಿಜಾತ, ನಂದಿ ಬಟ್ಟಲು ಕೃಷ್ಣ ಪೂಜೆಗೆ ಅರ್ಪಿಸುವರು.