ಆರೋಗ್ಯವೇ ಭಾಗ್ಯ

0

ಆರೋಗ್ಯವೇ ಭಾಗ್ಯ ಬೇಗ ಮಲಗಿ, ಬೇಗ ಎದ್ದು ಹಲ್ಲು, ಬಾಯಿ ಸ್ವಚ್ಛವಾಗಿ ತೊಳೆದುಕೊಂಡು ಒಂದು ಗ್ಲಾಸ್ ನೀರು ಕುಡಿಯಿರಿ. ಚಹಾ, ಕಾಫಿ, ಬೀಡಿ, ಸಿಗರೇಟು, ತಂಬಾಕು ಸೇವಿಸದೆ ಸ್ವಚ್ಛವಾಗಿ ಶೌಚ ಕಾರ್ಯ ಮುಗಿಸಿ, ಮಣ್ಣು ಅಥವಾ ಬೂದಿಯಿಂದ ಕೈ ತೊಳೆದುಕೊಳ್ಳಿ.

ಶೌಚಕ್ಕೆ ಕುಳಿತಾಗ ಹೆಚ್ಚು ಉಗುಳುವುದಾಗಲೀ, ಹೆಚ್ಚು ಉಸಿರು ತಡೆಯುವುದಾಗಲಿ ಒಳ್ಳೆಯದಲ್ಲ. ಶೌಚಕ್ಕೆ ಹೋಗಿ ಬಂದ ಕೂಡಲೇ ನೀರು, ಚಹಾಮ ತಿಂಡಿ, ಊಟ ಸೇವಿಸುವುದು ಒಳ್ಳೆಯದಲ್ಲ.ತಮ್ಮ ಶಕ್ತಿಗನುಸಾರವಾಗಿ ಸ್ವಚ್ಛಂದ ಸ್ಥಳದಲ್ಲಿ ಸೂರ್ಯ ನಮಸ್ಕಾರಗಳನ್ನು ರೂಢಿಯಲ್ಲಿಡಿ.

ದೇಹದ ಪೋಷಣೆ, ಬೆಳವಣಿಗೆಗೆ ಆಹಾರ ಅವಶ್ಯವಾದಷ್ಟೇ ಚೈತನ್ಯ, ಸ್ಫೂರ್ತಿಗೆ ಸೂರ್ಯ ನಮಸ್ಕಾರವೂ ಅತ್ಯವಶ್ಯಕವಾಗಿದೆ. ಸೂರ್ಯ ನಮಸ್ಕಾರ ಮುಗಿಸುವಾಗ ಶವಾಸನದಲ್ಲಿ ವಿಶ್ರಾಂತಿ ಪಡೆಯುವುದು ಹಿತ. ಸೂರ್ಯ ನಮಸ್ಕಾರ ಮುಗಿಸಿದ ಅರ್ಧ ತಾಸು ಅಥವಾ ಒಂದು ತಾಸಿನ ನಂತರ ಸ್ನಾನ ಮಾಡಬೇಕು.

ಸ್ನಾನ ಮಾಡುವಾಗ ಕೈ,ಕಾಲು, ತೋಳು, ತೊಡೆ, ಕಿಬ್ಬೊಟ್ಟೆ ಚೆನ್ನಾಗಿ ಹಸ್ತದಿಂದ ತಿಕ್ಕಬೇಕು. ಶರೀರ ಸ್ವಚ್ಛತೆ, ಕಾಂತಿ ಮತ್ತು ಆರೋಗ್ಯಕ್ಕೆ ಕಡಲೆಹಿಟ್ಟು, ಸೀಗೆಕಾಯಿಪುಡಿ ಸ್ನಾನದಲ್ಲಿ ಉಪಯೋಗಿಸಬೇಕು. ವಾರಕ್ಕೊಮ್ಮೆ ಅಭ್ಯಂಗ ಸ್ನಾನ ಮಾಡುವುದು ಒಳ್ಳೆಯದು.

ದಿನಾಲೂ ಕೈ, ಕಾಲು, ಮುಖ ತೊಳೆದುಕೊಳ್ಳುವಾಗ ಕಣ್ಣು ತೆರೆದು ನೀರನ್ನು ಮುಖಕ್ಕೆ ನೀರು ಹಾಕಿಕೊಳ್ಳಬೇಕು. ಬಾಯಿಯಲ್ಲಿ ನೀರು ಬಹಳ ಸಲ ಮುಕ್ಕಳಿಸಬೇಕು. ಸ್ನಾನದ ನಂತರ ನಮಗೆಲ್ಲವನ್ನೂ ದಯಪಾಲಿಸಿದ ದೇವರಿಗೆ ಕೃತಜ್ಞತೆ ಸಲ್ಲಿಸಲು ಪ್ರಾರ್ಥನೆ ಮಾಡಬೇಕು.

ಸ್ನಾನವಾದ ನಂತರ ಅರ್ಧ ತಾಸು ಅಥವಾ ತಾಸಿನ ಅವಧಿ ಮುಗಿಸಿ ಅಲ್ಪ ಉಪಹಾರ ಇಲ್ಲವೆ ಊಟ ಮಾಡಬೇಕು. ಚೆನ್ನಾಗಿ ಹಸಿಯದೆ ಊಟ ಮಾಡಬಾರದು. ಹಸಿದಾಗ ಹೆಚ್ಚು ವೇಳೆ ತಡೆಯಬಾರದು. ಊಟ ಮಾಡುವಾಗ ಮನಸ್ಸು ಪ್ರಸನ್ನವಾಗಿರಲಿ, ಆನಂದ, ಸಂತೃಪ್ತಿಯಿಂದ ಆಹಾರವನ್ನು ಪ್ರಸಾದವೆಂದು ಸ್ವೀಕರಿಸಬೇಕು.

ಮಾದಕ ಪೇಯ, ತಂಬಾಕು, ಬೀಡಿ, ಸಿಗರೇಟು, ಚಹಾ, ಕಾಫಿ ಮುಂತಾದವುಗಳು ಆರೋಗ್ಯ ಹಾಗೂ ಆರ್ಥಿಕ ದೃಷ್ಟಿಯಿಂದ ಹೆಚ್ಚು ಹಾನಿಕಾರಕವಾಗಿವೆ. ಸಾತ್ವಿಕ ಸಸ್ಯ ಆಹಾರವೇ ಸರ್ವ ಶ್ರೇಷ್ಠವಾದುದಾಗಿದೆ. ಆಹಾರದಂತೆ ವಿಚಾರ, ಆಚರಣೆ ಸಾಧ್ಯ.

ತಪ್ಪಲುಪಲ್ಲೆ, ಹಸಿ ತರಕಾರಿ, ನೆನೆಸಿದ ಬೇಳೆಕಾಳು, ಹಣ್ಣು-ಹಂಪಲು ಮುಂತಾದವು ನಿತ್ಯ ಆಹಾರದಲ್ಲಿ ಉಪಯೋಗಿಸುವುದು ಹೆಚ್ಚು ಹಿತಕರವಾಗಿರುತ್ತದೆ. ಆಹಾರವನ್ನು ಚೆನ್ನಾಗಿ ನೀರಾಗುವಂತೆ ನುರಿಸಿ ನುಂಗಬೇಕು.

ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು. ಊಟವಾದ ಕೂಡಲೇ ಮಲಗಬಾರದು. ಕನಿಷ್ಠ ಅರ್ಧ ಅಥವಾ ಒಂದು ತಾಸಿನ ನಂತರ ನೀರು ಕುಡಿದು ಮಲಗಬಹುದು.

ಬಲಭುಜ ಮೇಲೆ ಮಾಡಿ, ಮುಖ ತೆರೆದುಕೊಂಡು ಮಲಗಬೇಕು. ಮೂಗಿನಿಂದಲೇ ಉಸಿರಾಡಬೇಕು. ಶವಾಸನ ಸ್ಥಿತಿಯಲ್ಲಿ ಇದ್ದುಕೊಂಡೇ ನಿದ್ದೆ ಹೋಗಬಹುದು.ಬೇಗ ಮಲಗಿ ಬೇಗ ಏಳಿ ಹಗಲು ನಿದ್ದೆ ಮಾಡಬಾರದು. ರಾತ್ರಿ ನಿದ್ದೆ ಕೆಡಬಾರದು.

Leave A Reply

Your email address will not be published.