ನಮ್ಮ ಹಿರಿಯರು ಹೇಳಿ ಕೊಟ್ಟ ಊಟ ಪಾಠ ಸಸ್ಯಾಹಾರ ಶ್ರೇಷ್ಟ ಆಹಾರ. ಊಟಕ್ಕೆ ಕುಳಿತುಕೊಳ್ಳುವ ಮೊದಲು ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು. ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈ ತೊಳೆದುಕೊಳ್ಳಬೇಕು. ಗುರುನಾಮ ಸ್ಮರಣೆ ಮಾಡಿ ನೆಲದ ಮೇಲೆಯೇ ಚಕ್ಕಂಬಕ್ಕಾಲು ಹಾಕಿ ಕುಳಿತುಕೊಳ್ಳಬೇಕು.
ಊಟಕ್ಕೆ ಕುಳಿತಾಗ ನೆತ್ತಿಯ ಮೇಲೆ ಪೇಟ ಪಟಗಾ ಸುತ್ತಿರುವುದಾಗಲೀ ಟೋಪಿಯಾಗಲೀ ಇರಬಾರದು. ಕರವಸ್ತ್ರವಾಗಲೀ ಒಲ್ಲಿಟವಲ್ ಆಗಲೀ ನಿಮ್ಮ ಜೊತೆಗಿರಬೇಕು. ಊಟದೆಲೆ ಅಥವಾ ತಟ್ಟೆ ಈಗಾಗಲೇ ಶುಚಿಯಾಗಿಟ್ಟಿದ್ದರೂ ಮತ್ತೊಮ್ಮೆ ಸ್ವಲ್ಪ ನೀರಿನಲ್ಲಿ ತೊಳೆಯಬೇಕು.
ಊಟಕ್ಕೆ ಕುಳಿತಾಗ ಪಾದರಕ್ಷೆಗಳನ್ನು ಧರಿಸಿರಬಾರದು. ಊಟ ಮಾಡುವ ವೇಳೆಯಲ್ಲಿ ಕಸ ಗುಡಿಸಬಾರದು. ಒಂದು ಸಮನೆ ದಿಟ್ಟಿಸಬಾರದು.ಯಾರೊಬ್ಬರೂ ಅತ್ತಿಂದಿತ್ತ ಅಡ್ಡಕಸುಬಿ ಓಡಾಡಬಾರದು. ಕುಡಿಯುವ ನೀರು ತುಂಬಿದ ಚೆಂಬು ಲೋಟ ಪಕ್ಕದಲ್ಲಿರಬೇಕು.
ಗಂಟಲು ಮೇಲೆತ್ತಿ ಲೋಟದಲ್ಲಿಯೇ ನೀರು ಕುಡಿಯಬೇಕು. ಕಚ್ಚಿ ಕುಡಿಯಬಾರದು. ಭೂತಾಯಿ ಅಥವಾ ಜೀವಿಗಳಿಗೆ ಮೊದಲು ಒಂದು ತುತ್ತು ತೆಗೆದಿರಿಸಬೇಕು. ಊಟದ ವೇಳೆ ಯಾರಾದರೂ ಬಳಿಗೆ ಬಂದರೆ ಮೊದಲು ಅವರಿಗೆ ಊಟ ನೀಡಲು ಆದ್ಯತೆ ಕೊಡಬೇಕು. ತಡೆಯ ಮೇಲಾಗಲೀ ನೆಲದ ಮೇಲಾಗಲೀ ದರ್ಬಾರಿನಂತೆ ಎಡಗೈ ಊರಿಕೊಂಡಿರಬಾರದು. ತಮ್ಮ ಮೈಕೈ ಕೆರೆದುಕೊಳ್ಳಬಾರದು. ಕಣ್ಣು ಉಜ್ಜಬಾರದು ಅತ್ತಲಿತ್ತ ಪದೇ ಪದೇ ತಲೆ ಎತ್ತಿ ನೋಡಬಾರದು.
ನಾವು ತಿನ್ನುವ ಶಬ್ಧ ಪಕ್ಕದಲ್ಲಿ ಕುಳಿತವರಿಗೆ ಕೇಳಿಸಬಾರದು ಮತ್ತು ಗಬಗಬ ಅಂತ ತಿನ್ನಬಾರದು. ಉಣ್ಣುವ ತುತ್ತು ಎಣಿಸಬಾರದು. ಊಟಕ್ಕೆ ನೀಡುವಾಗಲೇ ಆಳ ನೋಡಿ ಅನ್ನ ಬಡಿಸಬೇಕು. ಇಷ್ಟು ತಿಂದ ಅಷ್ಟು ತಿಂದ ಎಂದು ಮಾತನಾಡಬಾರದು.
ಗಂಭೀರವಾದ ಯಾವ ಸಂಗತಿಗಳನ್ನೂ ಪ್ರಸ್ತಾಪಿಸಬಾರದು ಟೀವಿ ಮೊಬೈಲ್ ಇತ್ಯಾದಿ ನೋಡಬಾರದು. ನೆತ್ತಿಗೇರಿಸಿಕೊಳ್ಳುವಂತೆ ನಗುವುದಾಗಲೀ ಮಾತಾಡುವುದಾಗಲೀ ಮಾಡಬಾರದು. ಊಟಕ್ಕೆ ನೀಡುವ ವ್ಯಕ್ತಿಯನ್ನು ಹೊರತುಪಡಿಸಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳಬೇಕು.
ಕುಳಿತು ಸಮಾಧಾನವಾಗಿ ತಿನ್ನಬೇಕೇ ಹೊರತು ನಿಂತುಕೊಂಡು ಓಡಾಡುತ್ತಾ ಅಥವಾ ಜಿಗಿಯುತ್ತಾ ತಿನ್ನಬಾರದು. ಇಷ್ಟು ಸಾಕ ಅಷ್ಟು ಸಾಕ ಎಂದು ಅಳತೆ ಪ್ರಮಾಣಗಳಲ್ಲಿ ತೋರಿಸಿ ಕೇಳಬಾರದು. ಊಟದೆಲೆ ತಟ್ಟೆಯ ಪಕ್ಕದಲ್ಲಿ ಪದಾರ್ಥ ಚೆಲ್ಲಾಡಬಾರದು. ಬಿಸಿ ಆರಿಸಿಕೊಂಡು ತಿನ್ನಬೇಕು ತುಟಿಗಳನ್ನು ಮುಚ್ಚಿಬಾಯೊಳಗೆ ನುಂಗಬೇಕು.
ಊಟ ಮುಗಿದ ಬಳಿಕ ಅಗತ್ಯವಿರುವಷ್ಟು ನೀರು ಕುಡಿಯಬೇಕು. ಊಟದ ಬಳಿಕ ಅಭ್ಯಾಸವಿದ್ದಲ್ಲಿ ತಾಂಬೂಲ ಸವಿಯಬೇಕು. ಊಟ ಮಾಡಿದ ಕೂಡಲೇ ಊಟದ ತಟ್ಟೆಯನ್ನು ತೊಳೆದಿಡಬೇಕು. ಹೊತ್ತು ಮೀರಿಯಾಗಲೀ ಹೊತ್ತಿಗೆ ಮುಂಚಿತವಾಗಲೀ ಊಟ ಮಾಡಬಾರದು.
ಉಪ್ಪು ಹುಳಿ ಖಾರ ಯಾವುದೇ ವ್ಯತ್ಯಾಸಗಳಿದ್ದರೂ ಅಸಮಾಧಾನ ವ್ಯಕ್ತಪಡಿಸುವುದಾಗಲೀ ಸಿಟ್ಟಿಗೇಳುವುದಾಗಲೀ ಮಾಡಬಾರದು. ಊಟ ಮಾಡುವಾಗ ಊಟವನ್ನಷ್ಟೇ ಮಾಡಬೇಕು ಹೊರತು ಇನ್ನೊಂದು ಮತ್ತೊಂದು ಕೆಲಸ ಮಾಡಬಾರದು. ಊಟ ಮಾಡಿ ಮೈಮುರಿಯಬಾರದು.
ಊಟದ ನಂತರ ಗಾಳಿಗೆ ಮೈಯೊಡ್ಡಿ ನಾಲ್ಕೆಜ್ಜೆ ನಡೆದರೆ ಚೆಂದ. ಎಂಜಲು ಮಾಡಿದ ಪದಾರ್ಥಗಳನ್ನು ಇತರರಿಗೆ ನೀಡಬಾರದು. ಊಟದ ನಂತರ ಬಾಯಿ ಮುಕ್ಕಳಿಸುವುದನ್ನು ಮರೆಯಬಾರದು. ಊಟ ಮಾಡಿದ ತಕ್ಷಣವೇ ಮಲಗಬಾರದು ಅಥವಾ ಮಲಗಿಕೊಂಡು ಏನನ್ನೂ ತಿನ್ನಬಾರದು.
ಊಟದ ನಡುವೆ ಇನ್ನೂ ಹೆಚ್ಚಿನ ಅಗತ್ಯ ಆಹಾರ ಬೇಗ ಬರಲಿಲ್ಲವೆಂದು ಕೂಗುವುದಾಗಲೀ ಪಾತ್ರೆ ಶಬ್ಧ ಮಾಡುವುದಾಗಲೀ ಮುಂತಾದ ಅಸಮಾಧಾನ ತೋರಬಾರದು. ನಿದ್ರೆಗಣ್ಣಿನಲ್ಲಿ ತೂಕಡಿಸುತ್ತಾ ಊಟ ಮಾಡಬಾರದು.