ಬದುಕುವ ರೀತಿಗಳು. ಸದಾ ಆರೋಗ್ಯವಂತರಾಗಿ ಬಾಳಲು ಮಾರ್ಗದರ್ಶಿ ಸೂಕ್ತಗಳು, ಪ್ರತಿದಿನವೂ ಒಂದೇ ಶಿಸ್ತುಬದ್ಧ ದಿನಚರಿ ಇರುವಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಪ್ರತಿದಿನ ಬೇಗ ಮಲಗಿ ಬೇಗ ಏಳಬೇಕು. ಮಲಗುವಾಗ ಎಡ ಮಗ್ಗುಲಲ್ಲಿ ಮಲಗಿ ಬಲ ಮಗ್ಗುಲಿನಿಂದಲೇ ಏಳಬೇಕು. ಮಲಗುವ ಹಾಸಿಗೆ ತುಂಬಾ ದಪ್ಪ ಇರಬಾರದು. ತಲೆದಿಂಬು ತೆಳ್ಳಗೆ ಇರಬೇಕು. ಮುಸುಕು ಹಾಕಿಕೊಂಡು ಮಲಗಬಾರದು.
ಬೆಳಗ್ಗೆ ಎದ್ದ ತಕ್ಷಣ ಬಾಯಿ ತೊಳೆದುಕೊಂಡು ಒಂದು ಲೋಟ ತಾಮ್ರದ ಅಥವಾ ಬೆಳ್ಳಿಯ ಪಾತ್ರೆಗಳಿಂದ ನೀರು ಸೇವಿಸಬೇಕು, ಸ್ತೂಲಕಾಯದವರು ಬಿಸಿ ನೀರು ಸೇವಿಸುವುದು ಉತ್ತಮ. ಮಲ ಮೂತ್ರ ವಿಸರ್ಜನೆಯ ನಂತರ ದೈಹಿಕ ವ್ಯಾಯಾಮ ಕಡ್ಡಾಯ. ಸ್ನಾನದ ಮೊದಲು ಆಹಾರ ಸೇವನೆ ಹಿತಕರವಲ್ಲ. ಸ್ನಾನಕ್ಕೆ ಪ್ರಕೃತಿಗೆ ಅನುಗುಣವಾದ ಹದವಾದ ನೀರು ಒಳ್ಳೆಯದು.
ಸಾಬೂನು ಬದಲಾಗಿ ಧಾನ್ಯದ ಚೂರ್ಣ ತುಂಬಾ ಒಳ್ಳೆಯದು. ವಾರಕ್ಕೆ ಒಂದು ಸಾರಿ ಅಭ್ಯಂಗ ಸ್ನಾನ ಅತ್ಯುತ್ತಮ ಅಂದರೆ ಎಣ್ಣೆ ಸ್ನಾನ. ನಾವು ಉಪಯೋಗಿಸುವ ವಸ್ತ್ರ ಹಾಗೂ ಧರಿಸುವ ಬಟ್ಟೆಗಳು ಹತ್ತಿಯಿಂದ ತಯಾರಿಸಿದ ಉಡುಗೆ ಆರೋಗ್ಯ ವೃದ್ಧಿಸುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಬೆಳಿಗ್ಗೆಯಿಂದ ರಾತ್ರಿಯವರೆಗೆ ಎಲ್ಲಾ ಕೆಲಸಗಳ ಯೋಜನೆ ಸಿದ್ಧಪಡಿಸಿಕೊಂಡು ಮಾಡಿ ಮುಗಿಸಬೇಕು.
ಎಲ್ಲಾ ಕೆಲಸಗಳ ಮಧ್ಯೆ ಸಮಯಕ್ಕೆ ಸರಿಯಾಗಿ ಶಾಂತ ರೀತಿಯಿಂದ ಕುಳಿತು ಊಟ ಮಾಡುವುದು. ಮೊದಲ ತುತ್ತನ್ನು ದೇಶಿ ಆಕಳ ತುಪ್ಪದೊಂದಿಗೆ ಸೇವಿಸುವುದು ಜೀರ್ಣಕ್ರಿಯೆಗೆ ಒಳ್ಳೆಯದು. ಊಟ ಮಾಡುವಾಗ ಹೆಚ್ಚು ನೀರು ಸೇವಿಸದೇ ಊಟದ ಒಂದು ಘಂಟೆಯ ನಂತರ ಹೆಚ್ಚು ನೀರು ಸೇವನೆ ತುಂಬಾ ಒಳ್ಳೆಯದು.
ಊಟದ ಮೊದಲು ಹಣ್ಣು ಸೇವಿಸುವುದು ಉತ್ತಮ. ಊಟದಲ್ಲಿ ಶೇಕಡಾ 35ರಷ್ಟು ನೀರಿನ ಅಂಶವಿರುವ ಆಹಾರ ಸೇವಿಸುವುದು ಒಳ್ಳೆಯದು. ಅತ್ಯುತ್ತಮ ಆರೋಗ್ಯಕ್ಕಾಗಿ ರಾಸಾಯನಿಕ ಮುಕ್ತ ಆಹಾರ ಸೇವನೆ ಒಳ್ಳೆಯದು.
ಹೆಚ್ಚು ಬೇಯಿಸದ ಆಹಾರ ತುಂಬಾ ಆರೋಗ್ಯಕ್ಕೆ ಒಳ್ಳೆಯದು. ನಿತ್ಯವೂ ಶರೀರ ವಿಶ್ರಾಂತಿಗೆ ನಿದ್ದೆ, ಮನಸ್ಸಿನ ವಿಶ್ರಾಂತಿಗೆ ಧ್ಯಾನ,
ಕರುಳಿನ ವಿಶ್ರಾಂತಿಗೆ ಉಪವಾಸ, ಬುದ್ಧಿಯ ವಿಶ್ರಾಂತಿಗೆ ಸತ್ಸಂಗ ಮಾಡಿ ಆರೋಗ್ಯ ಕಾಪಾಡಿಕೊಳ್ಳುವುದು.
ನೀರನ್ನು ಯಾವಾಗಲೂ ಎಂಟು ಪದರ ಬಟ್ಟೆಯಲ್ಲಿ ಸೋಸಿ ಕುಡಿಯುವುದು ಉತ್ತಮ. ಬರೀ ನೆಲದಲ್ಲಿ ಕೂರುವುದು, ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ತುಂಬಾ ಹಸಿವು ಆದಾಗ ಅಥವಾ ಊಟವಾದ ತಕ್ಷಣ ಶ್ರಮದ ಕೆಲಸ ಮಾಡಬಾರದು.
ನಡೆಯುತ್ತಾ ಮಾತನಾಡುತ್ತಾ ಹಾಗೂ ನಗೆಯಾಡುತ್ತಾ ಭೋಜನವನ್ನು ಮಾಡಬಾರದು.ಅಪವಿತ್ರ ಅವಸ್ಥೆಯಲ್ಲಿ ಮತ್ತು ಎಂಜಲು ಬಾಯಿಯಿಂದ ಸ್ವಾಧ್ಯಾಯ ಜಪ ಮಾಡಬಾರದು. ಜಗಳ ಮಾಡುತ್ತಾ ತಯಾರಿಸಿದ ಹಾಗೂ ಕಾಲಿನಿಂದ ದಾಟಿರುವ ಆಹಾರ ಸೇವಿಸಲು ಯೋಗ್ಯವಲ್ಲ. ಕುಳಿತುಕೊಳ್ಳುವ, ಊಟ ಮಾಡುವಾಗ, ನಿದ್ರಿಸುವಾಗ, ಗುರು ಜನರಿಗೆ ವಂದಿಸುವಾಗ ಪಾದರಕ್ಷೆ ಧರಿಸಿರಬಾರದು.
ಮಲ ಮೂತ್ರಾದಿಗಳನ್ನು ತಡೆಯುವುದರಿಂದ ಹಲವು ಖಾಯಿಲೆಗಳು ಬರುತ್ತವೆ. ಹೊಟ್ಟೆ ಬಿರಿಯುವಷ್ಟು ಊಟವು ಆರೋಗ್ಯವನ್ನು ಕೆಡಿಸುತ್ತದೆ. ಊಟ ಮಾಡುವಾಗ ದುಃಖ, ಚಿಂತೆ, ಭಯ, ಆಕ್ರೋಶ, ಖಿನ್ನತೆ, ಆತುರ ಬೇಡ. ದೂರದರ್ಶನ ಹಾಗೂ ಮೊಬೈಲ್ ಬಳಕೆ ಮಾಡಬಾರದು. ಕೈ ಉಗುರುಗಳನ್ನು ಹಲ್ಲಿನಿಂದ ಕಚ್ಚಬಾರದು.
ಬೆತ್ತಲೆಯಾಗಿ ಸ್ನಾನ ಮಾಡಬಾರದು.
ಸ್ನಾನದ ನಂತರ ಒದ್ದೆ ಬಟ್ಟೆಯನ್ನು ಧರಿಸಬಾರದು. ಮತ್ತು ಮೈಲಿಗೆ ಬಟ್ಟೆಗಳನ್ನು ಧರಿಸಬಾರದು. ಅಶ್ಲೀಲ ಆಗುವ ದುರಾಲೋಚನೆ ಮಾಡುವುದರಿಂದ ಆರೋಗ್ಯ ಕೆಡುತ್ತದೆ. ನಿತ್ಯವೂ ಪುಸ್ತಕ ಓದುವುದರಿಂದ ಜ್ಞಾನವರ್ಧನೆಗೆ ಸಹಕಾರಿಯಾಗುತ್ತದೆ. ಶಕ್ತಿಗನುಗುಣವಾಗಿ ದಾನ ಧರ್ಮಗಳನ್ನು ಮಾಡಿ ಪುಣ್ಯ ಸಂಚಯ ಮಾಡಿಕೊಳ್ಳುವುದು.
ಬೆಳಗ್ಗೆ 8:30ರ ಒಳಗೆ ಮಧ್ಯಾಹ್ನ 12 ರಿಂದ 1 ಗಂಟೆಯ ಒಳಗೆ,
ರಾತ್ರಿ 8.30 ರ ಒಳಗೆ ಆಹಾರ ಸೇವಿಸುವುದು ಅತ್ಯುತ್ತಮ. ಹಿರಿಯರ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದು. ನಿಮ್ಮನ್ನು ಆಹ್ವಾನಿಸದಿದ್ದರೆ ಇತರರ ಸಂಭಾಷಣೆಯಲ್ಲಿ ಭಾಗಿಯಾಗಬೇಡಿ. ಇನ್ನೊಬ್ಬರ ಮಾತುಗಳನ್ನು ಕೇಳುವುದು ಸಭ್ಯತನವಲ್ಲ.
ಮಹಿಳೆಯರು ಮನೆಯೊಳಗೆ ದೀರ್ಘಕಾಲ ಅಳಬಾರದು ಇತರರೊಂದಿಗೆ ಅನಗತ್ಯವಾಗಿ ಜಗಳ ಮಾಡಬಾರದು. ದುಃಖದಾಯಕ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬಾರದು. ಕೊನೆಯದಾಗಿ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ಕೆಲಸ ಆಗಬಾರದು, ಉತ್ತಮ ಆರೋಗ್ಯವನ್ನು ರಾಷ್ಟ್ರಕಾರ್ಯಕ್ಕೆ ಮುಡಿಪಾಗಿರಲು.