ಕೃಷ್ಣನ ಪ್ರಕಾರ ಒಬ್ಬರು ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುವುದು

ಕೃಷ್ಣನ ಪ್ರಕಾರ ಒಬ್ಬರು ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುವುದು ಕೇವಲ ಎರಡೇ ಕಾರಣಕ್ಕಾಗಿ. ನೀವು ಎಷ್ಟಾದರೂ ಯೋಚಿಸಿ ಮೂರನೇ ಕಾರಣ ಸಿಗೋಲ್ಲ. ಪ್ರೀತಿಯಿಂದ ಕರೆದಾಗ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ.

ನಮಗೆ ಗತಿ ಇಲ್ಲದಿದ್ದಾಗ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ. ಇದು ಬಿಟ್ಟು ಮೂರನೇಯ ಕಾರಣವೇ ಇಲ್ಲ.
ಮಹಾಭಾರತದ ಒಂದು ಪ್ರಸಂಗ:ಕೃಷ್ಣ ಪರಮಾತ್ಮನು ದುರ್ಯೋಧನನ ಮನೆಗೆ ಸಂಧಾನಕ್ಕೆ ಹೋದಾಗ ದೂರ್ಯೋಧನನು ಪಂಚಭಕ್ಷ್ಯ ಪರಮಾನ್ನವನ್ನು ಅಡುಗೆ ಮಾಡಿಸಿರುತ್ತಾನೆ. ಅತಿಥಿಯಾಗಿ ಬಂದಂತಹ ಭಗವಂತನೊಂದಿಗೆ ಭಕ್ತಿಯಿಂದ ನಡೆದುಕೊಳ್ಳದೇ,

ತನ್ನ ವೈಭವ, ಐಶ್ವರ್ಯವನ್ನು ತೋರಿಸಿಕೊಳ್ಳಲು ಅಹಂಕಾರದಿಂದ ಶ್ರೀಕೃಷ್ಣನನ್ನು ದುರ್ಯೋಧನನು ಊಟಕ್ಕೆ ಆಹ್ವಾನಿಸುತ್ತಾನೆ. ಆಗ ಪರಮಾತ್ಮನು ನೀನು ಪ್ರೀತಿಯಿಂದ ಕರೆಯುತ್ತಿಲ್ಲ, ನಾನು ಗತಿಯಿಲ್ಲದೇ ಬಂದಿಲ್ಲ ಎಂದು ದುರ್ಯೋಧನನ ಆಹ್ವಾನವನ್ನು ತಿರಸ್ಕರಿಸುತ್ತಾನೆ. ಹಾಗಾದರೆ ಶ್ರೀಕೃಷ್ಣನು ಯಾರ ಮನೆಯ ಪ್ರಸಾದವನ್ನು ಸ್ವೀಕರಿಸುತ್ತಾನೆ

ಎಂದರೆ ದುರ್ಯೋಧನನ ಆಹ್ವಾನವನ್ನು ತಿರಸ್ಕರಿಸಿದ ನಂತರ ಶ್ರೀಕೃಷ್ಣನು ದಾಸಿಯ ಮಗನೆಂದು ದುರ್ಯೋಧನನು ಹೀಯಾಳಿಸುತ್ತಿದ್ದಂತಹ ಪರಮ ಜ್ಞಾನಿಯಾದ ವಿದುರನ ಮನೆಯ ಪ್ರಸಾದವನ್ನು ಸ್ವೀಕರಿಸುತ್ತಾನೆ. ಈ ಕಥೆಯ ಸಾರಾಂಶವೆಂದರೆ ಭಗವಂತನಿಗೆ ನಮ್ಮ ಪಂಚಭಕ್ಷ್ಯ ಪರಮಾನ್ನದ ಅವಶ್ಯಕತೆ ಇಲ್ಲ. ನಾವು ನಮ್ಮ ಡಾಂಭಿಕತೆ, ಅಹಂಕಾರವನ್ನು ಬಿಟ್ಟು, ಭಕ್ತಿಯಿಂದ ಪೂಜಿಸಿದರೆ ಭಗವಂತನು ನಮ್ಮನ್ನು ಬಿಗಿದಪ್ಪಿಕೊಂಡು ಜ್ಞಾನಾಮೃತವನ್ನು ಉಣಿಸುತ್ತಾನೆ.

Leave a Comment