ಸದಾ ಆರೋಗ್ಯವಂತರಾಗಿರಲು ಕೆಲವೊಂದು ಸಲಹೆಗಳು

0

ಸದಾ ಆರೋಗ್ಯವಂತರಾಗಿರಲು ಕೆಲವೊಂದು ಸಲಹೆಗಳು. ಪ್ರತಿದಿನ ನಿರ್ದಿಷ್ಟ ಸಮಯಕ್ಕೆ ಮಲಗಿ ಬೇಗ ಎದ್ದೇಳಬೇಕು. ಮಲಗುವಾಗ ಎಡ ಮಗ್ಗಲಿನಿಂದ ಮಲಗಿ ಬಲ ಮಗ್ಗಲಿನಿಂದಲೇ ಹೇಳಬೇಕು. ನಿತ್ಯವೂ ಶಿಸ್ತು ಬದ್ಧವಾದ ದಿನಚರಿಯನ್ನು ಅಳವಡಿಸಿಕೊಳ್ಳಬೇಕು. ಮಲಗುವಾಗ ಹಾಸಿಗೆಯು ತುಂಬಾ ದಪ್ಪ ಇರಬಾರದು. ತಲೆದಿಂಬು ಇಟ್ಟುಕೊಳ್ಳದೇ ಮಲಗಿಕೊಂಡರೆ ಒಳ್ಳೆಯದು.

ಮುಂಜಾನೆ ಎದ್ದ ತಕ್ಷಣ ಸ್ವಚ್ಛವಾಗಿ ಬಾಯಿ ತೊಳೆದು ತಾಮ್ರದ ಗ್ಲಾಸಿನಲ್ಲಿರುವ ನೀರು ಕುಡಿಯಬೇಕು. ಮಲಮೂತ್ರ ವಿಸರ್ಜನೆಯ ನಂತರ ವ್ಯಾಯಾಮ ಮಾಡುವುದು ಮತ್ತು ಹೊರಗಡೆ ವಾಕ್ ಮಾಡುವುದು ಒಳ್ಳೆಯದು.

ಸ್ನಾನಕ್ಕಿಂತ ಮೊದಲು ಆಹಾರವನ್ನು ಸೇವಿಸುವುದು ಒಳ್ಳೆಯದಲ್ಲ. ಸ್ನಾನಕ್ಕೆ ಮುಂಚೆ ಕೈಗೆ ಮುಖಕ್ಕೆ ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಂಡು ಸ್ನಾನ ಮಾಡಿದರೆ ತುಂಬಾ ಒಳ್ಳೆಯದು. ಹತ್ತಿಯಿಂದ ತಯಾರಿಸಿದ ಕಾಟನ್ ಬಟ್ಟೆಗಳನ್ನು ಧರಿಸುವುದು ಆರೋಗ್ಯಕ್ಕೆ ಒಳ್ಳೆಯದು.

ಒತ್ತಡ ಕಡಿಮೆ ಮಾಡಿಕೊಳ್ಳಲು ಬೆಳಿಗ್ಗೆಯಿಂದ ರಾತ್ರಿಯವರೆಗೆ ಎಲ್ಲಾ ಕೆಲಸಗಳ ಯೋಜನೆ ಸಿದ್ಧ ಮಾಡಿಕೊಂಡು ಕೆಲಸ ಮುಗಿಸಬೇಕು. ಕೆಲಸಗಳ ಮಧ್ಯೆ ಸರಿಯಾದ ಸಮಯಕ್ಕೆ ಶಾಂತಿಯುತವಾಗಿ ಕುಳಿತು ಊಟ ಮಾಡುವುದು. ಊಟದಲ್ಲಿ ಆಕಳ ತುಪ್ಪವನ್ನು ಸೇವಿಸುವುದು, ಜೀರ್ಣಕ್ರಿಯೆಗೆ ಒಳ್ಳೆಯದು.

ಉತ್ತಮ ಆರೋಗ್ಯಕ್ಕಾಗಿ ಔಷಧಿಗಳನ್ನು ಹೊಡೆದಿರುವ ಆಹಾರವನ್ನು ಸೇವಿಸಬಾರದು. ಆಹಾರವನ್ನು ಹದವಾಗಿ ಬೇಯಿಸಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಊಟಕ್ಕೆ ಮೊದಲೇ ಹೆಚ್ಚು ನೀರು ಸೇವಿಸಬಾರದು ಊಟದ ನಂತರ ನೀರನ್ನು ಸೇವಿಸಬೇಕು.

ಹಣ್ಣುಗಳನ್ನು ಊಟಕ್ಕಿಂತ ಒಂದು ಗಂಟೆ ಮೊದಲೇ ಸೇವಿಸುವುದು ಉತ್ತಮ. ಪ್ರತಿದಿನ ಶರೀರದ ವಿಶ್ರಾಂತಿಗೆ ನಿದ್ದೆ, ಮನಸ್ಸಿನ ವಿಶ್ರಾಂತಿಗೆ ಧ್ಯಾನ, ಕರುಳಿನ ವಿಶ್ರಾಂತಿಗೆ ಉಪವಾಸ, ಬುದ್ದಿಯ ವಿಶ್ರಾಂತಿಗೆ ಸತ್ಸಂಗ ಮಾಡಿದರೆ ಸಂಪೂರ್ಣ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ತುಂಬಾ ಹಸಿವೆಯಾದಾಗ ಅಥವಾ ಊಟವಾದ ತಕ್ಷಣ ಶ್ರಮದ ಕೆಲಸ ಮಾಡಬೇಡಿ. ನಡೆದಾಡುತ್ತಾ ಮಾತನಾಡುತ್ತಾ ಹಾಗೂ ನಗುತ್ತಾ ಭೋಜನವನ್ನು ಮಾಡಬಾರದು. ಜಗಳ ಮಾಡುತ್ತಾ ತಯಾರಿಸಿದ ಹಾಗೂ ಕಾಲಿನಿಂದ ದಾಟಿರುವ ಆಹಾರ ಸೇವಿಸುವುದು ಒಳ್ಳೆಯದಲ್ಲ.

ಕುಳಿತುಕೊಳ್ಳುವಾಗ ಊಟ ಮಾಡುವಾಗ, ನಿದ್ರಿಸುವಾಗ, ಗುರುಗಳಿಗೆ ನಮಸ್ಕರಿಸುವಾಗ ಪಾದರಕ್ಷೆಯನ್ನು ಧರಿಸಿರಬಾರದು. ನಾಲಿಗೆಯ ಚಪಲಕ್ಕೆ ಬಿದ್ದು ತೀರಾ ಹೊಟ್ಟೆ ಬಿರಿಯುವಷ್ಟು ಊಟ ಮಾಡಬಾರದು. ಟಿವಿ ಮೊಬೈಲ್ ನೋಡುತ್ತಾ ಊಟ ಮಾಡಬಾರದು.

ಉಗುರುಗಳನ್ನು ಹಲ್ಲಿನಿಂದ ಕಚ್ಚಬಾರದು. ಮಲಮೂತ್ರ ವಿಸರ್ಜನೆಯನ್ನು ಬಹಳ ಹೊತ್ತಿನವರೆಗೆ ಯಾವುದೇ ಕಾರಣಕ್ಕೂ ತಡೆಯಬಾರದು. ಸ್ನಾನದ ನಂತರ ಒದ್ದೆ ಬಟ್ಟೆಯಲ್ಲಿ ಇರಬಾರದು ಮತ್ತು ಮೈಲಿಗೆ ಬಟ್ಟೆಯನ್ನು ಮರಳಿ ಧರಿಸಬಾರದು.

ನಿತ್ಯ ಸಂಗೀತ ಕೇಳುವುದು ಪುಸ್ತಕ ಓದುವುದರಿಂದ ಮೆದುಳು ಚುರುಕಾಗುವುದು. ಕೆಟ್ಟ ಮತ್ತು ಮನಸ್ಸಿಗೆ ಬೇಸರ ಮೂಡಿಸುವ ಘಟನೆಗಳನ್ನು ಪದೇ ಪದೇ ನೆನಪಿಸಿಕೊಳ್ಳಬಾರದು.

Leave A Reply

Your email address will not be published.