ನಾವು ಈ ಲೇಖನದಲ್ಲಿ ವ್ಯರ್ಥ ದ್ವೇಷದಿಂದ ಸ್ವ ಹಾನಿಯೇ ಹೇಗೆ ಹೆಚ್ಚಾಗುತ್ತದೆ ಎಂದು ತಿಳಿಯೋಣ . ದ್ವೇಷ ತುಂಬಿದ ಮನಸ್ಸು ಗರಗಸಕ್ಕೆ ಸಿಕ್ಕ ಹಾವಿನಂತೆ ಎತ್ತ ಸರಿದರೂ ನೋವೇ .. ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ . ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವು ಅಂಗಡಿಗೆ ನುಗ್ಗುತ್ತದೆ . ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದು ಎಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗುತ್ತಿರುವಾಗ,
ಅಲ್ಲಿರುವ ಎರಡೂ ಬದಿಯಲ್ಲಿಯೂ ಹರಿತವಾಗಿ ಇರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ. ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೆ ಕೂಡ ಗಾಯವಾಗುತ್ತದೆ. ಇದರಿಂದ ಹಾವಿನ ಸಿಟ್ಟು ಮತ್ತಷ್ಟು ಹೆಚ್ಚಾಗುತ್ತದೆ. ಕೂಡಲೇ ಅದು ಆ ಗರಗಸಕ್ಕೆ ಬಳ್ಳಿಯಾಗಿ ಸುತ್ತಿಕೊಂಡು ತನ್ನ ಹಿಡಿತವನ್ನು ಬಲಪಡಿಸುತ್ತದೆ. ಮರುದಿನ ಬೆಳಿಗ್ಗೆ ಮರದ ಕೆಲಸದವನು ತನ್ನ ಅಂಗಡಿಯನ್ನು ತೆರೆದಾಗ ಅವನಿಗೆ ಗರಗಸದಲ್ಲಿ ಸುತ್ತಿಕೊಂಡು ಸತ್ತಿದ್ದ ಹಾವು ಕಾಣುತ್ತದೆ.
ಆದರೆ ಹಾವು ಬೇರೆಯವರ ಆಕ್ರಮಣದಿಂದ ಸಾಯಲಿಲ್ಲ . ಬದಲಾಗಿ ತನ್ನದೇ ಆದ ಸಿಟ್ಟು ಮತ್ತು ಹಠದಿಂದ ಸತ್ತಿತ್ತು. ನಮಗೂ ಕೂಡ ಸಿಟ್ಟು ಬಂದಾಗ ನಾವೂ ಆ ಹಾವಿನ ಹಾಗೆ, ಸಿಟ್ಟು ಮತ್ತು ಹಗೆಯಿಂದ ಎದುರಾಳಿಗೆ ನಷ್ಟ ಮಾಡುವ ಪ್ರಯತ್ನ ಪಡುತ್ತೇವೆ . ಆದರೆ ಸ್ವಲ್ಪ ಸಮಯದ ನಂತರ ಅದರಿಂದಾಗಿ ನಮಗೇ ಹೆಚ್ಚು ಹಾನಿ ಆಗುವುದರಲ್ಲಿ , ಯಾವುದೇ ಸಂಶಯವಿಲ್ಲ.
ಇತರರ ಬಗ್ಗೆ ನಾವು ದ್ವೇಷದ ಭಾವನೆಯನ್ನು ಬೆಳೆಸಿಕೊಂಡಾಗ ಅದು ನಮ್ಮ ಎದೆಯಲ್ಲಿ ಬಹುಕಾಲ ಕುದಿಯುತ್ತಾ ಹೋಗುತ್ತದೆ. ಇಂತಹ ದ್ವೇಷದ ಉರಿಯನ್ನು ನಮ್ಮೊಳಗೆ ಇಟ್ಟುಕೊಂಡು, ದೈಹಿಕವಾಗಿ ಮಾನಸಿಕವಾಗಿ ನಾವು ಅವರಿಗೆ ಯಾವ ರೀತಿ ಪೆಟ್ಟು ಕೂಡಬೇಕು ಎಂದು ಯೋಜನೆಗಳನ್ನು ಹಾಕುತ್ತಾ , ಮನಸ್ಸು ನಕಾರಾತ್ಮಕ ಯೋಚನೆಗಳಿಂದ ತುಂಬಿ ಹೋಗುತ್ತದೆ. ಆದ್ದರಿಂದಲೇ ವ್ಯರ್ಥ ದ್ವೇಷದಿಂದ ಸ್ವ ಹಾನಿಯೇ ಹೆಚ್ಚು ಎಂದು ಹೇಳಲಾಗಿದೆ.