ಸರಳ ಭಾಷೆಯಲ್ಲಿ ಭಗವದ್ಗೀತೆಯ 18 ಅಧ್ಯಾಯಗಳ ಸಂಪೂರ್ಣ ವಿವರಣೆಯನ್ನು ತಿಳಿದುಕೊಳ್ಳೋಣ .

0

ನಾವು ಈ ಲೇಖನದಲ್ಲಿ ಸರಳ ಭಾಷೆಯಲ್ಲಿ ಭಗವದ್ಗೀತೆಯ 18 ಅಧ್ಯಾಯಗಳ ಸಂಪೂರ್ಣ ವಿವರಣೆಯನ್ನು ತಿಳಿದುಕೊಳ್ಳೋಣ .

ಅಧ್ಯಾಯ 1 . ತಪ್ಪಾಗಿ ಯೋಚಿಸುವುದೇ ಜೀವನದ ಸಮಸ್ಯೆ . ಅರ್ಜುನನ ದುಃಖ ಇಲ್ಲಿ ಮುಖ್ಯ ವಿಷಯ .ಯುದ್ಧಕ್ಕಾಗಿ ಬಂಧುಗಳನ್ನೇ ಕೊಲ್ಲಬೇಕಾದ ದುಗುಡ ಹಾಗೂ ಖಿನ್ನತೆ . ಧರ್ಮ ಹಾಳು ಗೆಡವಿದ್ದನ್ನು ನೋಡುವುದಕ್ಕಿಂತ ಅವರೆಲ್ಲ ತನ್ನ ಬಂಧುಗಳೇ , ಅವರನ್ನು ಹೇಗೆ ಕೊಲ್ಲುವುದು ಎಂದು ಅರ್ಜುನ ಯೋಚಿಸುತ್ತಿರುತ್ತಾನೆ. ಆದರೆ, ಈ ಯೋಚನೆ ತಪ್ಪು . ಧರ್ಮವು ಈ ಭವ ಬಂಧನಗಳಿಗಿಂತ ಹೆಚ್ಚು . ತಪ್ಪಾಗಿ ಯೋಚಿಸುವುದರಿಂದ ತಪ್ಪಾದ ತೀರ್ಪು ಹೊರಬರುತ್ತದೆ . ಎಂಬುದನ್ನು ಶ್ರೀಕೃಷ್ಣ ವಿವರಿಸುತ್ತಾನೆ. ಆದರೆ, ಅರ್ಜುನನಿಗೆ ಸಮಾಧಾನ ಆಗುವುದಿಲ್ಲ . ಆತ ಗೊಂದಲ ಹಾಗೂ ದುಃಖದಿಂದ ಕುಳಿತುಕೊಳ್ಳುತ್ತಾನೆ .

ಅಧ್ಯಾಯ 2 . ಸರಿಯಾದ ಜ್ಞಾನವೇ ಎಲ್ಲ ಸಮಸ್ಯೆಗಳಿಗೆ ಅಂತಿಮ ಪರಿಹಾರ ಕೃಷ್ಣನು ಅರ್ಜುನನಿಗೆ ಅವನ ಎಲ್ಲ ದುಃಖ ದುಮ್ಮಾನ ಸಮಸ್ಯೆಗಳಿಗೆ ಅಜ್ಞಾನವೇ ಕಾರಣ , ಎಂಬುದನ್ನು ತಿಳಿಸುತ್ತಾನೆ . ಭೀಷ್ಮನಿಂದ ಹಿಡಿದು ಯಾರೊಬ್ಬರ ಆತ್ಮಗಳನ್ನು ನಾಶಪಡಿಸಲು ಆಗುವುದಿಲ್ಲ . ಹಾಗಾಗಿ ಅವರೆಲ್ಲಾ ಶಾಶ್ವತವಾಗಿ ಇರುತ್ತಾರೆ. ಯುದ್ಧವನ್ನು ದೂರ ಇಡುವುದರಿಂದ ನಿನ್ನ ಧರ್ಮವನ್ನೇ ದೂರ ಇಟ್ಟಂತಾಗುತ್ತದೆ . ಅದು ಪಾಪ ಕಾರ್ಯ. ಹೋರಾಡದಿದ್ದರೆ ಆತನೊಬ್ಬ ಹೇಡಿ ಎನಿಸಿಕೊಳ್ಳುತ್ತಾನೆ , ಎಂದು ಎಚ್ಚರಿಸುತ್ತಾನೆ ಕೃಷ್ಣ .

ಅಧ್ಯಾಯ 3 – ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಿಸ್ವಾರ್ಥ ಒಂದೇ ದಾರಿ .ಕೃಷ್ಣ ಇಲ್ಲಿ ನಿಸ್ವಾರ್ಥ ಸೇವೆಯಿಂದ ಕರ್ಮ ಯೋಗದ ಕುರಿತು ಮಾತನಾಡುತ್ತಾನೆ . ಕರ್ಮ ಯೋಗಿಯು ಧರ್ಮದ ಆಧ್ಯಾತ್ಮಕ್ಕೆ ಬೆಲೆ ಕೊಟ್ಟು , ತನ್ನೆಲ್ಲ ಕೆಲಸವನ್ನು ದೇವರಿಗೆ ಸಮರ್ಪಿಸುತ್ತಾನೆ . ಫಲಿತಾಂಶವನ್ನು ಯೋಚಿಸದೆ ತನ್ನ ಪಾಡಿಗೆ ತಾನು ಶಾಂತ ಚಿತ್ತದಿಂದ ಕೆಲಸ ಮಾಡಿಕೊಂಡು ಹೋಗುತ್ತಾನೆ . ನಮ್ಮ ಆಸೆ, ಸಿಟ್ಟು ಅತಿಯಾದ ಪ್ರೀತಿಯೇ ನಮ್ಮ ನಿಜವಾದ ಶತ್ರುಗಳು . ಇವು ನಮ್ಮನ್ನು ಸ್ವಾರ್ಥಿಗಳಾಗಿಸಿ ಶಾಂತಿಯನ್ನು ಕಸಿದುಕೊಳ್ಳುತ್ತದೆ ಎಂದು ತಿಳಿಸುತ್ತಾನೆ .

ಅಧ್ಯಾಯ 4 – ಧರ್ಮ ಸಂಸ್ಥಾಪನೆಗೆ ಭಗವಂತ ಅವತಾರ ಎತ್ತುತ್ತಾನೆ . ಧರ್ಮಕ್ಕೆ ಹಾನಿ ಆದಾಗ ಭಗವಂತನು ಸಜ್ಜನರನ್ನು ಕಾಪಾಡಿ , ದುರ್ಜನರನ್ನು ನಾಶ ಮಾಡಲು, ಪ್ರತೀ ಯುಗದಲ್ಲಿ ಭೂಮಿಯಲ್ಲಿ ಅವತರಿಸುತ್ತಾನೆ ಎಂದು ಕೃಷ್ಣ ವಿವರಿಸುತ್ತಾನೆ . ಅಷ್ಟೇ ಅಲ್ಲ ಭಗವಂತನ ಈ ಜನ್ಮ ರಹಸ್ಯವನ್ನು ಅರಿತವರು ಮೋಕ್ಷ ಪ್ರದರು ಎಂದು ತಿಳಿಸುತ್ತಾನೆ.

ಅಧ್ಯಾಯ 5 – ಅಹಂಕಾರದಿಂದ ಹೊರ ಬಂದು ಫಲದ ಆಸೆ ಇಲ್ಲದೆ ಕರ್ಮ ಮಾಡು, ಹೇಗೆ ಕರ್ತವ್ಯ ನಿಭಾಯಿಸುತ್ತಲೇ ಫಲದ ಆಸೆ ಇಲ್ಲದೆ ಸನ್ಯಾಸಿಯಂತಿರುವುದು ಎಂದು ಅರ್ಜುನ ಪ್ರಶ್ನಿಸುತ್ತಾನೆ. ಇದಕ್ಕೆ ಕೃಷ್ಣನು ನಿಜವಾದ ಕರ್ಮ ಯೋಗಿಯು ಫಲಿತಾಂಶದ ಬಗ್ಗೆ ಯೋಚಿಸದೆ ಫಲವನ್ನು ದೇವರಿಗೆ ಬಿಟ್ಟು ತಾನು ಕರ್ತವ್ಯ ನಿಭಾಯಿಸುತ್ತಾನೆ. ಈ ಮನಸ್ಥಿತಿಯಿಂದಾಗಿ ಆತ ಸ್ವಯಂ ನಿಯಂತ್ರಣ ಸಾಧಿಸಿ ಅಹಂಕಾರದಿಂದ ಹೊರ ಬರಬಲ್ಲ ಎಂದು ಹೇಳುತ್ತಾನೆ.

ಅಧ್ಯಾಯ 6 – ಧ್ಯಾನ ಸಾಧಕನಿಗೆ ಕರ್ಮ ಸಾಧನೆ ಸಾಧ್ಯ. ಧ್ಯಾನದ ಕುರಿತು ಇಲ್ಲಿ ಕೃಷ್ಣ ಹೇಳುತ್ತಾನೆ . ಧ್ಯಾನವನ್ನು ಅಭ್ಯಾಸ ಮಾಡುವವನು ಏಕಾಂಗಿಯಾಗಿ , ದೇಹವನ್ನೂ , ಮನಸ್ಸನ್ನೂ ಬಿಗಿ ಹಿಡಿದು ಮನಸ್ಸನ್ನು ಪರಮಾತ್ಮನಲ್ಲಿ ಕೂಡಿಸಿ ಕೊಂಡಿರಬೇಕು. ಪ್ರಯತ್ನದಿಂದಲೇ ಇಂದ್ರಿಯಗಳನ್ನು ಮನಸ್ಸನ್ನು ಗೆಲ್ಲಬೇಕು ಎನ್ನುತ್ತಾನೆ.

ಅಧ್ಯಾಯ – 7 ನೀನಾರು ಎಂದು ತಿಳಿದುಕೋ. ಧ್ಯಾನ ಮಾಡುತ್ತಿರುವುದರಿಂದ ನಿನಗೆ ನೀನು ಯಾರೆಂಬುದು ಅರಿವಾಗಬೇಕು. ಜ್ಞಾನಿಯು ನನ್ನಲ್ಲಿ ಲೀನನಾಗುತ್ತಾನೆ ಎಂಬ ತತ್ವ ಬೋದಿಸುತ್ತಾನೆ.

ಅಧ್ಯಾಯ – 8 ಪ್ರಯತ್ನ ಬಿಡಬೇಡ . ದೇವರ ಧ್ಯಾನದಲ್ಲಿ ಪ್ರಾಮಾಣಿಕವಾಗಿ ತೊಡಗಿರುವವನಿಗೆ ದೇವರು ಸಿಕ್ಕೇ ಸಿಗುತ್ತಾನೆ. ಪ್ರಯತ್ನ ಬಿಡ ಕೂಡದು ಎಂದು ಹೇಳುತ್ತಾನೆ.

ಅಧ್ಯಾಯ – 9 ದೇವರ ಧ್ಯಾನದಿಂದ ನನ್ನ ಸೇರಬಹುದು . ಈ ಜಗತ್ತೆಲ್ಲಾ ಕಣ್ಣಿಗೆ ಕಾಣದ ನನ್ನಿಂದ ತುಂಬಿರುವುದು ಈ ಎಲ್ಲಾ ವಸ್ತುಗಳೂ ನನ್ನಲ್ಲಿ ಇರುವುವು . ಆದರೆ ನಾನು ಅವುಗಳಲ್ಲಿ ಇಲ್ಲ. ಯಾವ ಜನರು, ತಮ್ಮ ಆತ್ಮವೆಂದು ನನ್ನನ್ನು ಧ್ಯಾನ ಮಾಡುತ್ತಾರೋ , ನಾನು ಅವರ ಯೋಗ ಕ್ಷೇಮ ಹೊರೆ ಹೊರುತ್ತೇನೆ ಎನ್ನುತ್ತಾನೆ.

ಅಧ್ಯಾಯ – 10 ಕರ್ಮಕ್ಕೆ ತಕ್ಕ ಫಲ ಪ್ರಾಪ್ತಿ . ಭೂಮಿಯ ಪ್ರತಿಯೊಂದು ಚರಾಚರಗಳಲ್ಲೂ ನಾನಿದ್ದೇನೆ . ನಿನ್ನ ಸುತ್ತಲ ಬದುಕು ಸಂಪೂರ್ಣ ಪವಾಡಗಳಿಂದಲೇ ತುಂಬಿದೆ. ಅವುಗಳನ್ನು ಕಂಡು ಖುಷಿ ಪಡು .
ಜಗತ್ತಿನಲ್ಲಿ ದೇವರಿರುವುದಲ್ಲ, ದೇವರೊಳಗೆ ಸಂಪೂರ್ಣ ಜಗತ್ತಿದೆ. ನಿನ್ನ ಕರ್ಮಕ್ಕೆ ತಕ್ಕ ಫಲವನ್ನು ನಾನು ನೀಡಿಯೇ ತೀರುತ್ತೇನೆ .

ಅಧ್ಯಾಯ – 11 ವಿಶ್ವರೂಪ ದರ್ಶನ . ಈಶ್ವರತ್ವದ ರೂಪವನ್ನು ನೋಡುವ ಆಸೆಯನ್ನು ಅರ್ಜುನ ವ್ಯಕ್ತಪಡಿಸುತ್ತಾನೆ. ಇದರಿಂದ ಕೃಷ್ಣನು ತನ್ನ ಆದಿ ಅಂತ್ಯವಿಲ್ಲದ ಪ್ರಕಾಶಮಾನವಾದ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಇದನ್ನು ನೋಡಿ ಅರ್ಜುನ ಬೆರಗಾಗಿ ಶರಣಾಗುತ್ತಾನೆ. ಸತ್ವವನ್ನು ಅರಿಯದೆ ಇದ್ದುದಕ್ಕೆ ಕ್ಷಮೆ ಯಾಚಿಸುತ್ತಾನೆ.

ಅಧ್ಯಾಯ 12 – ವೈರಾಗ್ಯದಿಂದ ಧ್ಯಾನಿಸುವವರೇ ಯೋಗಿ . ಯಾರು ಭಗವಂತನಲ್ಲಿ ಹೆಚ್ಚು ಪ್ರೀತಿಯನ್ನಿಟ್ಟು ವಿಶ್ವರೂಪವನ್ನು ಧ್ಯಾನಿಸುತ್ತಾ ಉಪಾಸನೆ ಮಾಡುವರೋ ಅವರು ಹೆಚ್ಚಿನ ಯೋಗಿಗಳು . ವಿವೇಕ ವೈರಾಗ್ಯಗಳಿಂದ ಅದನ್ನು ಅಭ್ಯಾಸ ಮಾಡಬೇಕು . ಅದು ಕಷ್ಟವಾದರೆ , ಭಗವಂತನ ಪೀತ್ಯರ್ಥವಾಗಿ ಕರ್ಮಗಳನ್ನು ಮಾಡು . ಅದು ಕಷ್ಟವಾದರೆ , ಕರ್ಮಗಳ ಫಲಗಳ ಬಯಕೆಗಳನ್ನೆಲ್ಲಾ ಬಿಡು ಎನ್ನುತ್ತಾನೆ.

ಅಧ್ಯಾಯ 13 – ಮಾಯೆಯಿಂದ ಕಳಚಿಕೊಂಡು ಭಗವಂತನನ್ನು ಭಜಿಸು. ಈ ಬ್ರಹ್ಮಾಂಡವೇ ಒಂದು ಮಾಯೆ . ಇವೆಲ್ಲದರ ಸೃಷ್ಟಿಕರ್ತ ಬ್ರಹ್ಮನಾಗಿದ್ದು, ಅವನು ಪ್ರತಿಯೊಂದು ಅಣುರೇಣತೃಣ ಕಾಷ್ಟಗಳಲ್ಲೂ ನೆಲೆಸಿದ್ದಾನೆ . ನಿನ್ನೊಳಗೂ ಆತ ಇರುವುದನ್ನು ಅರ್ಥ ಮಾಡಿಕೊಂಡು ಮಾಯೆಯಿಂದ ಕಳಚಿಕೊಂಡು ಭಕ್ತಿಯಿಂದ ಜೀವಿಸು ಎಂದು ಕೃಷ್ಣ ವಿವರಿಸುತ್ತಾನೆ.

ಅಧ್ಯಾಯ 14 – ನಿನ್ನ ದೃಷ್ಟಿಕೋನಕ್ಕೆ ಹೊಂದುವ ಜೀವನ ಶೈಲಿ ಅಳವಡಿಸಿಕೋ ಎಲ್ಲರಲ್ಲೂ ಮೂರು ಗುಣಗಳಿರುತ್ತವೆ. ಸಾತ್ವಿಕ ಗುಣವು ಬೆಳಕಿನ , ಸುಖದ , ವಿಚಾರದ ರೂಪ . ರಜೋ ಗುಣವು
ಪ್ರೀತಿ , ಬಯಕೆ ಅಹಂಕಾರದ ಕ್ರಿಯಾ ಶೀಲಾ ರೂಪ . ತಮವು ಅಜ್ಞಾನ ತಪ್ಪು ತಿಳುವಳಿಕೆ ಆಲಸ್ಯದ ರೂಪ .
ಇವುಗಳಲ್ಲಿ ಶಕ್ತವಾದ ಗುಣ . ಆತ್ಮವನ್ನು ಕಟ್ಟಿಹಾಕುತ್ತದೆ. ಎಲ್ಲರಲ್ಲಿಯೂ ಇಷ್ಟೂ ಗುಣಗಳದ್ದರೂ ಒಂದು ಗುಣ ಮೇಲುಗೈ ಸಾಧಿಸುವುದು . ಸಾತ್ವಿಕ ಗುಣದವನು ಮೋಕ್ಷ . ರಾಜಸಿಕ ಗುಣದವನು ಪುನರ್ಜನ್ಮ . ಹಾಗೂ ತಾಮಸಿಕ ಗುಣದವನು ಕೆಳಮಟ್ಟದ ಜನ್ಮವೆತ್ತುತ್ತಾನೆ ಎಂದು ಕೃಷ್ಣ ಹೇಳುತ್ತಾನೆ.

ಅಧ್ಯಾಯ 15 – ದೈವಿಕತ್ವಕ್ಕೆ ಬೆಲೆ ಕೊಡು, ಈ ಪ್ರಾಪಂಚಿಕ ಜೀವನದಲ್ಲಿ ನಾವು ಹೇಗೆ ಸಾವು ಹಾಗೂ ಪುನರ್ಜನ್ಮಗಳ ಮಧ್ಯೆ ಸಿಲುಕಿದ್ದೇವೆ , ಎಂಬುದನ್ನು ಕೃಷ್ಣ ಅರ್ಜುನನಿಗೆ ಅರ್ಥ ಮಾಡಿಸುತ್ತಾನೆ. ಆತ ಸಂಸಾರವನ್ನು ತಲೆಕೆಳಗಾದ ಅರಳಿ ಮರಕ್ಕೆ ಹೋಲಿಸಿ ಮಾತನಾಡುತ್ತಾನೆ. ಪಾಪ ಪುಣ್ಯಗಳ ಕರ್ಮಗಳನ್ನು ಅಂಟಿಸುವ ಒಳ ಬೇರುಗಳು ಮೇಲಕ್ಕೂ ಕೆಳಕ್ಕೂ ಹರಡಿಕೊಂಡಿದೆ . ಸುಖದ ಬಯಕೆಗಳೆ ಅದರ ಚಿಗುರುಗಳು . ಇದು ಆದಿ ಅಂತ್ಯವಿಲ್ಲದ್ದು, ಇದನ್ನು ವೈರಾಗ್ಯವೆಂಬ ಶಸ್ತ್ರದಿಂದ ಕತ್ತರಿಸಬೇಕು . ದೈವಿಕತ್ವಕ್ಕೆ ಬೆಲೆ ಕೊಟ್ಟಾಗ , ಇದು ಸಾಧ್ಯ ಎಂದು ಕೃಷ್ಣ ಮನ ಮುಟ್ಟುವಂತೆ ಹೇಳುತ್ತಾನೆ .

ಅಧ್ಯಾಯ 16 – ಉತ್ತಮನಾಗಿ ಇರುವುದೇ ವರ . ಸಿಟ್ಟು, ಕ್ರೂರತೆ , ಅಜ್ಞಾನ , ಅಪ್ರಮಾಣಿಕತೆ , ಅತಿಯಾಸೆ, ಅನೈತಿಕತೆ, ಅಹಂಕಾರ ಮುಂತಾದವು ವ್ಯಕ್ತಿಯನ್ನು ಆಧ್ಯಾತ್ಮಿಕವಾಗಿ ನಾಶ ಮಾಡುತ್ತವೆ . ಆದರೆ ಮಾನವೀಯತೆ , ಸತ್ಯ , ಅಹಿಂಸೆ, ತಾಳ್ಮೆ , ಇಂದ್ರಿಯಗಳ ನಿಯಂತ್ರಣ ಮುಂತಾದ ಸದ್ಗುಣಗಳು ಜ್ಞಾನಕ್ಕೆ ಕಾರಣವಾಗಿ ಸ್ವತಂತ್ರ ರನ್ನಾಗಿಸುತ್ತದೆ .

ಅಧ್ಯಾಯ 17 – ಮೇರು ಸತ್ಯ ಇಲ್ಲಿ ಕೃಷ್ಣ ಓಂ ತತ್ ಸತ್ ಮಂತ್ರದ ಮಹತ್ವ ಹೇಳುತ್ತಾನೆ. ಇದರ ಅರ್ಥ ಮೇರು ಸತ್ಯ ಎಂದು . ಓಂ ನಾಮ ದಿಂದಲೇ ಸತ್ಕಾರ್ಯ ಆರಂಭಿಸಬೇಕು. ಯಜ್ಞ ದಾನ ಹಾಗೂ ತಪಸ್ಸು ಸತ್ಕಾರ್ಯಗಳು ಎಂದು ವಿವರಿಸುತ್ತಾನೆ.

ಅಧ್ಯಾಯ 18 – ಪರಮಾತ್ಮನೊಂದಿಗೆ ಐಕ್ಯ . ಫಲದ ಬಯಕೆಯಿಂದ ಮಾಡುವ ಕರ್ಮಗಳನ್ನು ಬಿಡುವುದು ಸಂನ್ಯಾಸ . ಆ ಎಲ್ಲಾ ಕಮ್ಮಗಳನ್ನು ಮಾಡಿ ಫಲವನ್ನು ಬಯಸದೇ ಇರುವುದು ತ್ಯಾಗ ಎಂದು ಹೇಳುವ ಕೃಷ್ಣನು ಕರ್ಮ ಯೋಗಿಯಾಗಿ ಬದುಕಬೇಕು. ನಿಮ್ಮ ಕೆಲಸವೇ ನಿಮ್ಮನ್ನು ಆತ್ಮದೊಂದಿಗೆ ಜೋಡಿಸುತ್ತದೆ. ಪರಮಾತ್ಮನೊಂದಿಗೆ ಐಕ್ಯ ಆಗಲು ದಾರಿ ತೋರುತ್ತದೆ. ಎಂದು ವಿವರಿಸುತ್ತಾನೆ.

Leave A Reply

Your email address will not be published.