ನಿಮ್ಮ ಮನೆಯ ಸುತ್ತ ಯಾವ ಗಿಡವಿದ್ದರೆ ಏನು ಫಲ ಎಂಬುದನ್ನು

ನಿಮ್ಮ ಮನೆಯ ಸುತ್ತ ಯಾವ ಗಿಡವಿದ್ದರೆ ಏನು ಫಲ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಮನೆಯ ಮುಂದೆ ತೆಂಗಿನ ಕಾಯಿ ಮರವಿದ್ದರೆ ಮನಸ್ಸಿಗೆ ನೆಮ್ಮದಿ ದೊರೆಯುವುದು. ಕಲ್ಪವೃಕ್ಷವೆಂದು ಕರೆಯಲ್ಪಡುವ ಇದರಿಂದ ಸಮಾಜದಲ್ಲಿ ಮನೆಯ ಸದಸ್ಯರಿಗೆ ಗೌರವ ಮರ್ಯಾದೆ ದೊರಕುವುದು.

ಮನೆಯ ಮುಂದೆ ಪಾರಿಜಾತ ವೃಕ್ಷವಿದ್ದರೆ ತಾಯಿ ಲಕ್ಷ್ಮಿದೇವಿಯ ಅನುಗ್ರಹವಾಗುವುದು. ಆ ಮನೆಗೆ ಶುಭವಾಗುವುದು. ಮನೆಯ ಮುಂದೆ ಮಲ್ಲಿಗೆಯ ಗಿಡವಿದ್ದರೆ ಸರ್ವ ಕಾರ್ಯಗಳಲ್ಲಿ ಸಿದ್ಧಿ ದೊರಕುವುದು ಶುಭಫಲಗಳು ಲಭಿಸುವುದು.

ಮನೆಯ ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ಬಾಳೇಗಿಡವಿದ್ದರೇ ಮನೆಗೆ ಸುಖ ಸಂಮೃದ್ಧಿಯನ್ನು ತರುತ್ತದೆ. ಬಾಳೆ ಗಿಡವನ್ನು ಭಗವಾನ್ ವಿಷ್ಣುವಿನ ನಿವಾಸ ಎಂದು ನಂಬಲಾಗಿದೆ.ಮನೆ ಮುಂದೆ ಕೇದಿಗೆ ಸಸ್ಯವಿದ್ದರೇ ನಿಮ್ಮ ಶತೃಗಳು ನಾಶವಾಗುವರು.

ಮುತ್ತಲ ಗಿಡವು ಮನೆಗೆ ಬ್ರಹ್ಮ ಶಕ್ತಿಯನ್ನು ಕೊಡುತ್ತದೆ. ಶ್ರೀಗಂಧ ಮತ್ತು ಹಲಸಿನ ಗಿಡವು ದುಃಖ ದಾರಿದ್ರ್ಯ ನಿವಾರಣೆ ಮಾಡುತ್ತದೆ. ಬಿದಿರಿನ ಗಿಡವನ್ನು ನೆಡುವುದರಿಂದ ಕಳ್ಳಕಾಕರ ಭಯ ದೂರವಾಗುತ್ತದೆ. ಮನೆಯ ರಕ್ಷಣೆಯನ್ನು ಮಾಡುತ್ತದೆ.

ಕಗ್ಗಲಿ ವೃಕ್ಷವನ್ನು ಹಚ್ಚುವುದರಿಂದ ಮನೆಯಲ್ಲಿನ ಸದಸ್ಯರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ.ದಾಳಿಂಬೆ ಗಿಡವನ್ನು ಹಚ್ಚುವುದರಿಂದ ಮನೆಯಲ್ಲಿನ ವಿವಾಹ ಯೋಗ್ಯ ಯುವಕ ಯುವತಿಯರಿಗೆ ಬೇಗ ಕಂಕಣ ಬಲ ಕೂಡಿಬರುವುದು. ಮನೆಯಲ್ಲಿನ ಸಕಾರಾತ್ಮಕ ಶಕ್ತಿಯು ಹೆಚ್ಚುವುದು.

ಮನೆಯ ಮುಂದೆ ಅಶೋಕ ಮರವಿದ್ದರೆ ಸುಖ ಶಾಂತಿ ನೆಲೆಸುವುದು. ಮನೆಯ ಮುಂದೆ ಬಸರಿಮರವಿದ್ದರೆ ಯಜ್ಞ ಮಾಡಿದಷ್ಟು ಪುಣ್ಯ ದೊರಕುವುದು. ಮನೆಯ ಸಮೀಪ ಬೇವಿನ ಗಿಡವಿದ್ದರೆ ಆಯುಷ್ಯ ವೃದ್ದಿಯಾಗುವುದು. ಸೂರ್ಯನ ಅನುಗ್ರಹವಾಗುವುದು. ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವುದು.

ನೇರಳೆ ಹಣ್ಣಿನ ಗಿಡದಿಂದ ಕುಲದ ಗೌರವ ಹೆಚ್ಚಾಗುವುದು. ಸ್ತ್ರೀ ಸಂತಾನ ಬಯಸುವವರು ನೇರಳೆ ಗಿಡವನ್ನು ಹಚ್ಚಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಮನೆಯ ಹತ್ತಿರ ಬಿಲ್ವಪತ್ರೆಯ ಮರ ಇದ್ದರೆ ಅಪಮೃತ್ಯು ದೋಷ ನಿವಾರಣೆಯಾಗುವುದು. ದುಃಖ ದಾರಿದ್ರ್ಯ ನಿವಾರಣೆ ಆಗುವುದು.

ಮನೆ ಹತ್ತಿರದಲ್ಲಿರುವ ಅರಳಿಮರವನ್ನು ಪೂಜಿಸಿದರೆ ಎಲ್ಲಾ ಪಾಪಗಳು ಪರಿಹಾರವಾಗುವವು. ಮನೆಯ ಹತ್ತಿರ ಗುಡ್ಡದ ನೆಲ್ಲಿಕಾಯಿ ಗಿಡವನ್ನು ಹಚ್ಚುವುದರಿಂದ ಸಿರಿಸಂಪತ್ತು ಲಭಿಸುವುದು. ಇದರ ನೀರನ್ನು ಕುಡಿಯುವುದರಿಂದ ರೋಗಗಳ ನಿವಾರಣೆ ಆಗುವುದು.

Leave a Comment